ಸ್ಮಶಾನದ ಜಾಗಕ್ಕೆ ಒತ್ತಾಯಿಸಿ ಶವವಿಟ್ಟು ಧರಣಿ

ಮಡಿಕೇರಿ ಡಿ.24: ದಿಡ್ಡಳ್ಳಿ ಹೋರಾಟ ಮೊಟಕು ಗೊಳ್ಳುತ್ತಿರುವ ಬೆನ್ನ ಹಿಂದೆಯೇ ಸ್ಮಶಾನದ ಜಾಗಕ್ಕಾಗಿ ಒತ್ತಾಯಿಸಿ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಹೋರಾಟ ತೀವ್ರಗೊಂಡಿದೆ. ಪೈಸಾರಿ ಗುಡಿಸಲು ನಿವಾಸಿಗಳು ಮೃತ ದೇಹವೊಂದನ್ನು ಇಟ್ಟು ಕಳೆದ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಡಿ.22 ರಂದು ಪಾಲೇಮಾಡು ಗುಡಿಸಲು ನಿವಾಸಿ ತಿಮ್ಮಪ್ಪ (82) ಮೃತ ಪಟ್ಟಿದ್ದರು. ಕಳೆದ ಏಳು ವರ್ಷಗಳಿಂದ ಗುಡಿಸಲು ನಿವಾಸಿಗಳು ಪಕ್ಕದಲ್ಲಿರುವ ಖಾಲಿ ಪೈಸಾರಿ ಸ್ಥಳದಲ್ಲಿ 4ಎಕರೆ ಜಾಗದಲ್ಲಿ ಬೇಲಿ ಹಾಕಿಕೊಂಡು ಮೃತ ಪಟ್ಟವರ ಶವ ಸಂಸ್ಕಾರ ನಡೆಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಹೆಸರಿಗೆ ಜಿಲ್ಲಾಡಳಿತ 12.70 ಎಕರೆ ಜಾಗವನ್ನು ನೀಡಿತ್ತು. ಸ್ಮಶಾನ ಜಾಗ ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರಾದ ಜಾಗದಲ್ಲಿ ಇದೆ ಎಂದು ಆರೋಪಿಸಿರುವ ನಿವಾಸಿಗಳು, ಸ್ಮಶಾನ ಜಾಗವನ್ನು ಬಿಟ್ಟು ಕೊಡುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಶೆಡ್ ನಿರ್ಮಿಸಿಕೊಂಡು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರು.
ತಿಮ್ಮಪ್ಪಅವರ ಮೃತ ದೇಹವನ್ನು ಶುಕ್ರವಾರ ಮಧ್ಯಾಹ್ನದ ಬಳಿಕ ಸ್ಮಶಾನದ ಜಾಗವೆಂದು ಹೇಳಿಕೊಳ್ಳುತ್ತಿದ್ದ ಪ್ರದೇಶಕ್ಕೆ ತರುತ್ತಿದ್ದಂತೆ ಪೊಲೀಸರು ಶವ ಸಂಸ್ಕಾರ ನೆರವೇರಿಸಬಾರದು ಎಂದು ತಡೆಯೊಡ್ಡಿದರು. ಇದರಿಂದ ನಿವಾಸಿಗಳು ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಶವವಿಟ್ಟು ಪ್ರತಿಭಟನೆಗೆ ಮುಂದಾದರು. ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಶುಕ್ರವಾರ ರಾತ್ರಿ 10 ಗಂಟೆಗೆ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಾಟೆಕಾಡುವಿನಲ್ಲಿ ಸ್ಮಶಾನಕ್ಕಾಗಿ 2 ಎಕರೆ ಜಾಗ ನೀಡಲಾಗಿದೆ. ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು, ಈ ಜಾಗದಲ್ಲಿ ಸ್ಮಶಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವಾಟೆಕಾಡುವಿನಲ್ಲಿ ಶವ ಸಂಸ್ಕಾರ ನಡೆಸಲು ಸಾಧ್ಯವಿಲ್ಲ, ಇದೇ ಪ್ರದೇಶದಲ್ಲಿ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಶವವನ್ನಿಟ್ಟುಕೊಂಡು ಸ್ಥಳ ಬಿಟ್ಟು ಕದಲದೆ ಹೋರಾಟ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು. ಶುಕ್ರವಾರ ರಾತ್ರಿ ಇಡೀ ನಿವಾಸಿಗಳು ಶವವನ್ನಿಟ್ಟುಕೊಂಡು ಸ್ಥಳದಲ್ಲೇ ಕುಳಿತು ಹೋರಾಟ ನಡೆಸಿದರು.
ಶನಿವಾರ ಬೆಳಗ್ಗೆ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಹಾಗೂ ತಹಶೀಲ್ದಾರ್ ಕುಸುಮಾ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಸ್ಟೇಡಿಯಂ ಜಾಗದ ಒಂದು ಭಾಗದಲ್ಲಿ ಅರ್ಧ ಎಕರೆ ಜಾಗ ನೀಡುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ನಮಗೆ ಮೊದಲಿದ್ದ ಜಾಗದಲ್ಲೇ ಸ್ಮಶಾನ ನೀಡುವಂತೆ ಒತ್ತಾಯಿಸಿ ಹೋರಾಟ ಮುಂದುವರಿಸಿದರು. ಬಳಿಕ ಎರಡು ಎಕರೆ ಜಾಗವನ್ನು ಮೊದಲಿದ್ದ ಜಾಗದಲ್ಲೇ ನೀಡುವುದಾಗಿ ಉಪ ವಿಭಾಗಾಧಿಕಾರಿ ನಂಜುಂಡೆಗೌಡ ಹಾಗೂ ತಹಶೀಲ್ದಾರ್ ಕುಸುಮಾ ಹೇಳಿದರು. ಪ್ರತಿಭಟನಾಕಾರರು ಮೃತ ಶರೀರದ ಅಂತ್ಯಕ್ರಿಯೆ ನಡೆಸಲು ಗುಂಡಿ ತೆಗೆಯಲು ಪ್ರಾರಂಭಿಸಿದರು. ಆದರೆ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪಸ್ಥಳಕ್ಕೆ ಆಗಮಿಸುವವರೆಗೆ ಶವವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರ ಮುಖಂಡ ಮೊಣ್ಣಪ್ಪ ಹೇಳಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಯಿತು.
ಮಧ್ಯಾಹ್ನ 3 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಬಿಎಸ್ಪಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸ್ಮಶಾನ ಸ್ಥಳವನ್ನು ಪರಿಶೀಲಿಸಿ ಕಳೆದ ಏಳು ವರ್ಷಗಳಿಂದ ಶವ ಸಂಸ್ಕಾರ ನಡೆಸಿರುವ ಸ್ಥಳವನ್ನು ಸ್ಟೇಡಿಯಂ ನಿರ್ಮಾಣಕ್ಕೆ ಸಮತಟ್ಟು ಮಾಡುವಾಗ ಜೆಸಿಬಿ ಮೂಲಕ ಮಣ್ಣು ಮುಚ್ಚಲಾಗಿದೆ. ಇದು ಬಡವರಿಗೆ ಆಗುತ್ತಿರುವ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಶವದೆದುರು ಕುಳಿತು ಪ್ರತಿಭಟಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಇದ್ದರೆ ಶವವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







