ರೂ. 500ರ ನೋಟು ಮುದ್ರಣ ಮೂರು ಪಟ್ಟು ಹೆಚ್ಚಳ
ನಾಶಿಕ್, ಡಿ.24: ಇಲ್ಲಿನ ಕರೆನ್ಸಿ ನೋಟ್ ಪ್ರೆಸ್‌ನಲ್ಲಿ (ಸಿಎನ್‌ಪಿ) ದಿನವಹಿ ರೂ. 500ರ ಹೊಸ ನೋಟುಗಳ ಮುದ್ರಣದ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಹೊಸ ನೋಟುಗಳ ಕೊರತೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ನವೆಂಬರ್ ಮಧ್ಯದಲ್ಲಿ ದಿನಕ್ಕೆ 35 ಲಕ್ಷ ನೋಟುಗಳಷ್ಟಿದ್ದ ರೂ. 500ರ ನೋಟುಗಳ ಮುದ್ರಣದ ಪ್ರಮಾಣವನ್ನು ಈಗ ದಿನಕ್ಕೆ 1 ಕೋಟಿಗೆ ಹೆಚ್ಚಿಸಲಾಗಿದೆ. ತಾವು ವಿವಿಧ ಮುಖಬೆಲೆಯ 1.9 ಕೋಟಿ ರೂ. ನೋಟುಗಳನ್ನು ದಿನಕ್ಕೆ ಮುದ್ರಿಸುತ್ತಿದ್ದು, ಅವುಗಳಲ್ಲಿ ರೂ. 500ರ ನೋಟುಗಳ ಪ್ರಮಾಣ 1 ಕೋಟಿಯಷ್ಟಿದೆ. ಉಳಿದವು ರೂ. 100, ರೂ. 50 ಹಾಗೂ ರೂ. 20 ಮುಖಬೆಲೆಯ ನೋಟುಗಳಾಗಿವೆಯೆಂದು ಸಿಎನ್‌ಪಿಯ ಮೂಲಗಳು ಟಿಒಐಗೆ ತಿಳಿಸಿವೆ.
ನಾಶಿಕ್‌ನ ಸೆಕ್ಯುರಿಟಿ ಪ್ರೆಸ್‌ನಲ್ಲಿ ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದಿಲ್ಲ.
ನೋಟು ರದ್ದತಿಯ ಬಳಿಕ, ಅತ್ಯಂತ ದೊಡ್ಡ ನೋಟುಗಳ ಹೇರೊಂದನ್ನು ಶುಕ್ರವಾರ ಆರ್‌ಬಿಐ ಕಳುಹಿಸಿದೆ. ಅದು ಕಳುಹಿಸಿದ ಒಟ್ಟು 4.3 ಕೋಟಿ ನೋಟುಗಳಲ್ಲಿ ರೂ. 500ರ 1.1 ಕೋಟಿ, ರೂ. 100ರ 1.2 ಕೋಟಿ, ರೂ. 50 ಹಾಗೂ 20ರ ತಲಾ 1 ಕೋಟಿ ನೋಟುಗಳಿದ್ದವು.





