ಉದ್ಯೋಗದ ನಿರೀಕ್ಷೆಯಲ್ಲಿ ಜೂನಿಯರ್ ಹಾಕಿ ವಿಶ್ವ ಚಾಂಪಿಯನ್ನರು

ಕೋಲ್ಕತಾ, ಡಿ.24: ಇತ್ತೀಚೆಗಷ್ಟೇ ಹಾಕಿ ಜೂನಿಯರ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಕಿರೀಟ ಧರಿಸಿರುವ ಆಟಗಾರರು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ರಾಜ್ಯ ಸರಕಾರ ಹಾಗೂ ಕ್ಲಬ್‌ಗಳಿಂದ ಪಡೆಯಲು ಸಾಧ್ಯವಾಗದ ಉದ್ಯೋಗವನ್ನು ಕೇಂದ್ರ ಸರಕಾರದಿಂದ ಪಡೆಯುವುದು ಭೇಟಿಯ ಕಾರ್ಯಸೂಚಿಯಲ್ಲಿರುವ ಮುಖ್ಯ ಅಂಶವಾಗಿದೆ.
‘‘ನಮಗೆ ಭದ್ರತೆಯ ಅಗತ್ಯವಿದೆ. ನಾವು ಗಾಯಗೊಂಡಾಗ ನಮ್ಮನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ನಮಗೆ ಯಾವ ಉದ್ಯೋಗವೂ ಇಲ್ಲ. ನಮ್ಮ ರಾಜ್ಯ (ಪಂಜಾಬ್) ಸರಕಾರ ನಮಗೆ ಉದ್ಯೋಗ ನೀಡಬೇಕು. ನಾವು ಡಿ.28 ರಂದು ಪ್ರಧಾನಿಯವರನ್ನು ಭೇಟಿಯಾದಾಗ ಈ ವಿಷಯವನ್ನು ಅವರ ಬಳಿ ಪ್ರಸ್ತಾವಿಸಲಿದ್ದೇವೆ’’ ಎಂದು ಬೆಲ್ಜಿಯಂ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆಲುವಿನ ಗೋಲು ಬಾರಿಸಿರುವ ಗುರ್ಜಂತ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಸರಕಾರದಿಂದ ನಮಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಣೆಯಾಗಿದೆ. ಆದರೆ, ನಮಗೆ ಭದ್ರತೆಯಿರುವ ಉದ್ಯೋಗದ ಅಗತ್ಯವಿದೆ. ನಾವು ಈಗಷ್ಟೇ ವಿಶ್ವಕಪ್‌ನ್ನು ಜಯಿಸಿದ್ದೇವೆ. 2018ರ ಹಿರಿಯರ ವಿಶ್ವಕಪ್‌ನಲ್ಲಿ ಪದಕ ಜಯಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಫೈನಲ್‌ನಲ್ಲಿ ಗೋಲು ಬಾರಿಸಿದ್ದ ಇನ್ನೋರ್ವ ಆಟಗಾರ ಸಿಮ್ರಾನ್‌ಜಿತ್ ಸಿಂಗ್ ಹೇಳಿದ್ದಾರೆ.
ನಾವು ಆಟಗಾರರಿಗೆ ಕೆಲಸ ಗಿಟ್ಟಿಸಿಕೊಳ್ಳಲು ನೆರವು ನೀಡಲು ಯತ್ನಿಸುವೆವು. ಒಎನ್‌ಜಿಸಿಯಲ್ಲಿ ಕೆಲವೊಂದು ನಿರ್ದಿಷ್ಟ ನಿಯಮಗಳಿವೆ. ಈಗ ಮೂರು ಉದ್ಯೋಗ ಖಾಲಿಯಿದೆ. ಈ ಉದ್ಯೋಗ ದೊರಕಿಸಿಕೊಡಲು ನಾವು ಯತ್ನಿಸುವೆವು ಎಂದು ಒಎನ್‌ಜಿಸಿ ಕೋಚ್ ಸಂದೀಪ್ ಸಾಂಗ್ವಾನ್ ಹೇಳಿದ್ದಾರೆ.
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ್ದು ದೊಡ್ಡ ಸಾಧನೆ. ಅದೊಂದು ಕಠಿಣ ಪರೀಕ್ಷೆಯಾಗಿತ್ತು. ನಾವು ನಮ್ಮ ಮೇಲೆ ನಂಬಿಕೆ ಇರಿಸಿದ್ದೆವು. ಐತಿಹಾಸಿಕ ವಿಶ್ವಕಪ್ ಜಯಿಸಿದ ತಂಡದ ಸದಸ್ಯರಾಗಿರುವ ವಿಕ್ರಮ್‌ಜೀತ್ ಸಿಂಗ್ ಹೇಳಿದ್ದಾರೆ.
ಜೂನಿಯರ್ ವಿಶ್ವಕಪ್ ಜಯಿಸಿರುವ ಭಾರತದ ತಂಡದ ಹೆಚ್ಚಿನ ಆಟಗಾರರು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಗೆ ಸೇರಿದವರು.
2001ರಲ್ಲಿ ಜೂನಿಯರ್ ವಿಶ್ವಕಪ್ ಜಯಿಸಿದ್ದ ಎಲ್ಲ ಆಟಗಾರರಿಗೆ ಸರಕಾರದಿಂದ ಎಲ್ಲ ಲಾಭ ಲಭಿಸಿತ್ತು. ಕೆಲವರು ಪೊಲೀಸ್ ಅಧಿಕಾರಿಗಳಾಗಿ ಆಯ್ಕೆಯಾಗಿದ್ದರು. ನಾವು ಕೂಡ ಸರಕಾರದಿಂದ ಭಾರೀ ನಿರೀಕ್ಷೆಯಲ್ಲಿದ್ದೇವೆ ಎಂದು ಗುರ್ಜಂತ್ ಸಿಂಗ್ ಹೇಳಿದ್ದಾರೆ.







