ಸರಕಾರದಿಂದ ಭರವಸೆಯ ವೇತನ ಇನ್ನೂ ಲಭಿಸಿಲ್ಲ: ಲಹಿರಿ
ಕೋಲ್ಕತಾ/ಬೆಂಗಳೂರು, ಡಿ.24: ರಿಯೋ ಒಲಿಂಪಿಕ್ಸ್‌ನ ಪೂರ್ವ ತಯಾರಿಗೆ ಕೇಂದ್ರ ಸರಕಾರ ಭರವಸೆ ನೀಡಿದ್ದ 30 ಲಕ್ಷ ರೂ.ವನ್ನು ಇನ್ನೂ ಪಾವತಿಸಿಲ್ಲ. ಇದಕ್ಕೆಲ್ಲಾ ಇಂಡಿಯನ್ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹಾಗೂ ಕೇಂದ್ರ ಕ್ರೀಡಾ ಸಚಿವಾಲಯವೇ ನೇರ ಹೊಣೆ ಎಂದು ಕೋಲ್ಕತಾ ಮೂಲದ ಗಾಲ್ಫರ್ ಅನಿರ್ಬನ್ ಲಹಿರಿ ಆರೋಪಿಸಿದ್ದಾರೆ.
2 ದಿನಗಳ ಹಿಂದೆಯಷ್ಟೇ ಭಾರತದ ಇನ್ನೋರ್ವ ಗಾಲ್ಫರ್ ಎಸ್‌ಎಸ್‌ಪಿ ಚೌರಾಸಿಯಾ ಇದೇ ವಿಷಯಕ್ಕೆ ಸಂಬಂಧಿಸಿ ಸರಕಾರವನ್ನು ಟೀಕಿಸಿದ್ದರು. ಇದೀಗ ಚೌರಾಸಿಯಾ ಕೂಗಿಗೆ ಲಹಿರಿ ಧ್ವನಿಗೂಡಿಸಿದ್ದಾರೆ.
‘‘ನಾಲ್ಕು ತಿಂಗಳ ಹಿಂದೆ ಕ್ರೀಡಾ ಸಚಿವಾಲಯ ಎಲ್ಲ ಪೇಪರ್‌ವರ್ಕ್ ಮಾಡಿ ಮುಗಿಸಿದೆ. ನನಗೆ ಈವರೆಗೆ 5 ಲಕ್ಷ ರೂ. ಲಭಿಸಿದೆ. ಲಹಿರಿ ಒಂದೂ ಪೈಸೆಯನ್ನೂ ಸ್ವೀಕರಿಸಿಲ್ಲ’’ ಎಂದು ಚೌರಾಸಿಯಾ ಬುಧವಾರ ಕೋಲ್ಕತಾದಲ್ಲಿ ಆರೋಪಿಸಿದ್ದರು.
‘‘ಚೌರಾಸಿಯಾ ಹೇಳಿದ್ದೆಲ್ಲವೂ ಸರಿಯಾಗಿದೆ. ಅವರು ಯಾವ ವಿಷಯವನ್ನೂ ಅಡಗಿಸಿಟ್ಟಿಲ್ಲ.ನಾವು 4 ವಿವಿಧ ಬಿಲ್‌ಗಳು ಸೇರಿದಂತೆ ಎಲ್ಲವನ್ನೂ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವೆ. ಭಾರತದ ಕ್ರೀಡಾ ಪ್ರಾಧಿಕಾರ, ಇಂಡಿಯನ್ ಗಾಲ್ಫ್ ಯೂನಿಯನ್ ಹಾಗೂ ಐಒಎಗೆ ಪತ್ರಗಳನ್ನು ಕಳುಹಿಸಿಕೊಟ್ಟಿರುವೆ. ಅವರು ಹೇಳಿದ್ದೆಲ್ಲವನ್ನೂ ಮಾಡಿದ್ದೇ’’ಎಂದು ಲಹಿರಿ ಹೇಳಿದ್ದಾರೆ.
ನಮಗೆ 30 ಲಕ್ಷ ರೂ. ಮಂಜೂರು ಆಗಿದೆ ಎಂದು ಪತ್ರ ಲಭಿಸಿತ್ತು. ಆದರೆ, ರಿಯೋ ಒಲಿಂಪಿಕ್ಸ್‌ನಿಂದ ವಾಪಸಾದ ಬಳಿಕ ಆ ಮೊತ್ತವನ್ನು 15 ಲಕ್ಷ ರೂ.ಗೆ ಕಡಿತಗೊಳಿಸಲಾಗಿದೆ. ಚೌರಾಸಿಯಾ ಅವರು ಸಾಯಿ ಕೇಂದ್ರಕ್ಕೆ 40-50 ಬಾರಿ ತೆರಳಿದ ಬಳಿಕ, 5.5 ಲಕ್ಷ ರೂ. ಲಭಿಸಿದೆ ಎಂದು ಲಹಿರಿ ಹೇಳಿದ್ದಾರೆ.







