ದಾಖಲೆಯ 5ನೆ ಬಾರಿ ಸಹಿಗೆ ಬಂದ ವೈರಿ ಆಸ್ತಿ ಕಾಯ್ದೆ ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಸಮಾಧಾನ
ಹೊಸದಿಲ್ಲಿ, ಡಿ.24: ವೈರಿ ಆಸ್ತಿ ಕಾಯ್ದೆ ಅಧ್ಯಾದೇಶಕ್ಕೆ ಸತತ ದಾಖಲೆಯ 5ನೆ ಬಾರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹಿ ಹಾಕಿದ್ದಾರೆ. ಆದರೆ, ಸುಗ್ರೀವಾಜ್ಞೆಯನ್ನು ಕಾಯ್ದೆಗಾಗಿ ಬದಲಾಯಿಸಲು ಸರಕಾರ ವಿಫಲವಾಗಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಯ್ದೆಯು ರಾಷ್ಟ್ರೀಯ ಹಿತಾಸಕ್ತಿಯದಾಗಿರುವುದರಿಂದ ಹಾಗೂ ಬಾಕಿಯುಳಿದಿರುವ ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿ ಜನವರಿಯಲ್ಲಿ ವಿಚಾರಣೆಗೆ ಬರಲಿರುವುದನ್ನು ದೃಷ್ಟಿಯಲ್ಲಿರಿಸಿ ರಾಷ್ಟ್ರಪತಿ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆಂದು ಮೂಲಗಳು ತಿಳಿಸಿವೆ.
ಆಗಸ್ಟ್‌ನಲ್ಲಿ ಈ ಅಧ್ಯಾದೇಶ ಸಂಪುಟದ ಅನುಮೋದನೆಯ ಹೊರತಾಗಿ ನಾಲ್ಕನೆ ಬಾರಿಗೆ ಅವರ ಮುಂದೆ ಬಂದಿತ್ತು. ಹೀಗಾಗಿರುವುದು ಸ್ವಾತಂತ್ರಾ ನಂತರ ಇದೇ ಪ್ರಥಮವಾಗಿತ್ತು. ಇದರಿಂದ ಅಸಮಾಧಾನಿತರಾಗಿದ್ದ ಮುಖರ್ಜಿ, ಸಾರ್ವಜನಿಕರ ಒಳಿತಿಗಾಗಿ ಅದಕ್ಕೆ ಸಹಿ ಹಾಕುತ್ತಿದ್ದೇನೆಂಬ ಟಿಪ್ಪಣಿಯನ್ನು ಸರಕಾರಕ್ಕೆ ಬರೆದಿದ್ದರು. ಆದರೆ, ಪುನಃ ಎಂದೂ ಸಂಪುಟವನ್ನು ಉಲ್ಲಂಘಿಸಬಾರದೆಂದು ಎಚ್ಚರಿಕೆ ನೀಡಿದ್ದರು. ಇದೊಂದು ಪೂರ್ವೋದಾಹರಣೆ ಯಾಗಬಾರದೆಂದು ಮುಖರ್ಜಿ ಹೇಳಿದ್ದರು. ವಾಗ್ದಂಡನೆಯ ಬಳಿಕ ಸರಕಾರವು ಸಂಪುಟದ ಅನುಮೋದನೆ ಪಡೆದಿತ್ತೆನ್ನಲಾಗಿದೆ.
ಯುದ್ಧಗಳ ಬಳಿಕ ಪಾಕಿಸ್ತಾನ ಅಥವಾ ಚೀನಕ್ಕೆ ಹೋಗಿದ್ದವರು ಬಿಟ್ಟು ಹೋದ ಆಸ್ತಿಯ ಉತ್ತರಾಧಿಕಾರ ಅಥವಾ ವರ್ಗಾವಣೆಯ ದಾವೆಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ 48 ವರ್ಷ ಹಳೆಯ ವೈರಿ ಆಸ್ತಿ ಕಾಯ್ದೆಗೆ ಸುಗ್ರೀವಾಜ್ಞೆಯು ತಿದ್ದುಪಡಿ ತರುತ್ತದೆ.
ಕಾಯ್ದೆ ತಿದ್ದುಪಡಿ ಮಸೂದೆಯೊಂದನ್ನು ಈ ವರ್ಷಾರಂಭದಲ್ಲೇ ಲೋಕಸಭೆ ಮಂಜೂರು ಮಾಡಿತ್ತು. ಆದರೆ, ವಿಪಕ್ಷಗಳು ರಾಜ್ಯ ಸಭೆಯಲ್ಲಿ ಅದನ್ನು ತಡೆದಿದ್ದವು. ಅದರಿಂದಾಗಿ ಕಾಯ್ದೆ ತಿದ್ದುಪಡಿಯನ್ನು ಅಧ್ಯಾದೇಶಗಳ ಬಳಿಕ ಅಧ್ಯಾದೇಶಗಳ ಮೂಲಕ ಜೀವಂತವಿರಿಸಲಾಗಿದೆ.







