ಮಿಲಾನ್‌ಗೆ ಇಟಾಲಿಯನ್ ಸೂಪರ್ ಕಪ್

ದೋಹಾ, ಡಿ.24: ಪೆನಾಲ್ಟಿ ಶೂಟೌಟ್‌ನಲ್ಲಿ ಬದ್ಧ ಎದುರಾಳಿ ಜುವೆಂಟಸ್ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿರುವ ಎಸಿ ಮಿಲಾನ್ ಫುಟ್ಬಾಲ್ ತಂಡ ಇಟಾಲಿಯನ್ ಸೂಪರ್ ಕಪ್‌ನ್ನು ಮುಡಿಗೇರಿಸಿಕೊಂಡಿದೆ.
ಮಿಲಾನ್ ತಂಡ 2011ರ ಬಳಿಕ ಮೊದಲ ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದಲ್ಲಿ ತಲಾ ಒಂದು ಗೋಲು ಬಾರಿಸಿ 1-1 ರಿಂದ ಸಮಬಲ ಸಾಧಿಸಿದ್ದವು. ಮಿಲಾನ್ ತಂಡ ಈ ಋತುವಿನಲ್ಲಿ ಎರಡನೆ ಬಾರಿ ಜುವೆಂಟಸ್ ತಂಡವನ್ನು ಸೋಲಿಸಿದೆ. ಅಕ್ಟೋಬರ್‌ನಲ್ಲಿ ಸ್ಯಾನ್‌ಸಿರೊದಲ್ಲಿ ನಡೆದ ಟೂರ್ನಿಯಲ್ಲಿ ಮಿಲಾನ್ ತಂಡ 1-0 ಅಂತರದಿಂದ ಗೆಲುವು ಸಾಧಿಸಿತ್ತು. ‘‘ಈ ಗೆಲುವು ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ ಎಂದು ನಾನು ಭಾವಿಸಿರುವೆ. ಇದು ನಮ್ಮ ಆರಂಭ. ಈ ಗೆಲುವು ನಮಗೆ ಖಂಡಿತವಾಗಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ’’ ಎಂದು ಎಸಿ ಮಿಲನ್ ಕೋಚ್ ವಿನ್ಸೆಂರೊ ಮಾಂಟೆಲ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಋತುವಿನಲ್ಲಿ ಇಟಾಲಿಯನ್ ಲೀಗ್ ಹಾಗೂ ಕಪ್ ಡಬಲ್ ಪ್ರಶಸ್ತಿಯನ್ನು ಜಯಿಸಿರುವ ಜುವೆಂಟಸ್ ತಂಡ 18ನೆ ನಿಮಿಷದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, 36ನೆ ನಿಮಿಷದಲ್ಲಿ ಗೋಲು ಬಾರಿಸಿರುವ ಮಿಲಾನ್ ತಂಡ 1-1 ರಿಂದ ಸಮಬಲ ಸಾಧಿಸಿತು.
ಸೂಪರ್ ಕಪ್ ಫುಟ್ಬಾಲ್ ಟೂರ್ನಿ ಕತರ್‌ನಲ್ಲಿ ಎರಡನೆ ಬಾರಿ ನಡೆದಿದ್ದು, ಸುಮಾರು 11,356 ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಂಡರು.





