ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೆಹ್ವಾಗ್ ಕೋಚ್?
ಮುಂಬೈ, ಡಿ.24: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಪಂಜಾಬ್‌ನ ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ತನ್ನ ಸ್ಥಾನ ತೊರೆದಿದ್ದಾರೆ. ಬಂಗಾರ್ ಮಾರ್ಗದರ್ಶನದಲ್ಲಿ ಪಂಜಾಬ್ ಫ್ರಾಂಚೈಸಿ ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಮುಂಬರುವ ಆವೃತ್ತಿಯ ಐಪಿಎಲ್‌ನಲ್ಲಿ ಸೆಹ್ವಾಗ್ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಟೀಮ್ ಇಂಡಿಯದ ಬ್ಯಾಟಿಂಗ್ ಕೋಚ್ ಆಗಿರುವ ಬಂಗಾರ್ ಕಳೆದ ತಿಂಗಳು ಕೋಚ್ ಹುದ್ದೆ ತ್ಯಜಿಸುವುದಾಗಿ ಹೇಳಿದ್ದರು. ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಅವರೊಂದಿಗೆ ಕಳೆದ ಐಪಿಎಲ್ ವೇಳೆಯೇ ನಡೆದ ವಾಗ್ವಾದದ ಬಳಿಕ ಬಂಗಾರ್ ತಂಡವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.
ಪಂಜಾಬ್ ತಂಡ ಆಸ್ಟ್ರೇಲಿಯದ ವೇಗಿ ಮಿಚೆಲ್ ಜಾನ್ಸನ್, ಆಲ್‌ರೌಂಡರ್ ರಿಷಿ ಧವನ್ ಹಾಗೂ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕೈಲ್ ಅಬಾಟ್‌ರನ್ನು ಕೈಬಿಟ್ಟು ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಡೇವಿಡ್ ಮಿಲ್ಲರ್‌ರನ್ನು ತಂಡದಲ್ಲಿ ಉಳಿಸಿಕೊಂಡಿತ್ತು.







