ಗ್ರಾಹಕರ ದೂರುಗಳ ತ್ವರಿತ ಪರಿಹಾರಕ್ಕೆ ಹೆಚ್ಚುವರಿ ಪೀಠ: ಖಾದರ್
ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಮಂಗಳೂರು, ಡಿ.24: ಗ್ರಾಹಕರ ದೂರುಗಳ ತ್ವರಿತ ಪರಿಹಾರಕ್ಕಾಗಿ ದೂರುಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚುವರಿ ಪೀಠಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ ಇಲಾಖೆ ಮತ್ತು ಜಿಲ್ಲಾ ಗ್ರಾಹಕರ ಸಂಘಟನೆಗಳ ಒಕ್ಕೂಟ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗ್ರಾಹಕ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ನಗರದ ಬೆಸೆಂಟ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಹಕ ವ್ಯಾಜ್ಯಗಳ ಪರಿಹಾರಕ್ಕಾಗಿ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸುವ ಸಲುವಾಗಿ ಪ್ರತಿ 15 ದಿನಕ್ಕೊಮ್ಮೆ ‘ಜನತಾ ಅದಾಲತ್’ ಮಾಡುವ ಚಿಂತನೆಯೂ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ವಿ.ಶೋಭಾ, ಸದಸ್ಯೆ ಲಾವಣ್ಯಾ, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್‌ಕುಮಾರ್ ಶೆಟ್ಟಿ ಪಿ. ಉಪಸ್ಥಿತರಿದ್ದರು.
ಜಿಲ್ಲಾ ಗ್ರಾಹಕ ಸಂಘಟನೆಗಳ ಅಧ್ಯಕ್ಷ ಎಂ.ಜೆ.ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರ ಜಯಪ್ಪ ಸ್ವಾಗತಿಸಿದರು.







