ನೋಟು ನಿಷೇಧ ಪರಿಣಾಮ: ಈರುಳ್ಳಿ ರೈತರ ಗೋಳು

ಏಶ್ಯಾದ ಬೃಹತ್ ಈರುಳ್ಳಿ ಮಾರುಕಟ್ಟೆ ಲಸಲ್ ಗಾಂವ್‌ಗೆ ಟ್ರಕ್‌ಗಳಲ್ಲಿ ಈರುಳ್ಳಿ ಬಂದು ಬೀಳಲಾರಂಭಿಸುತ್ತದೆ. ವ್ಯಾಪಾರಿಗಳು ಈರುಳ್ಳಿಯ ದರ ನಿಗದಿಪಡಿಸುತ್ತಿದ್ದಂತೆ ರೈತರು ಮಾರುಕಟ್ಟೆಯ ಬದಿಯಲ್ಲಿ ನಿಂತು ನೋಡುತ್ತಿರುತ್ತಾರೆ. ‘‘ನೋಟು ರದ್ದತಿಯ ನಂತರ ಈರುಳ್ಳಿ ದರ ಅರ್ಧಕ್ಕೆ ಇಳಿದಿದೆ’’ ಎನ್ನುತ್ತಾನೆ ದೀಪಕ್.
ಈರುಳ್ಳಿ ಬೆಳೆಗಾರ 26ರ ಹರೆಯದ ದೀಪಕ್ ಪಾಟೀಲ್‌ನನ್ನು ಕಂಡು ಪ್ರಧಾನಿ ನರೇಂದ್ರ ಮೋದಿಗೆ ಸಂತೋಷವಾಗಿರಬಹುದು. ಮುಂಬೈಯ ಉತ್ತರದಲ್ಲಿ ಸುಮಾರು 300 ಕಿ.ಮೀ. ದೂರದಲ್ಲಿರುವ ಮಲೆಗಾಂವ್ ತಾಲೂಕಾದ ವಾಲ್ವಾಡಿಯ ಕೃಷಿಕನಾಗಿರುವ ಈತ ತನ್ನ ಬಳಿ ಬ್ಯಾಂಕ್ ಖಾತೆಯಿದೆ ಮತ್ತು ಮೊಬೈಲ್ ಫೋನಿದೆ ಮತ್ತು ಈರುಳ್ಳಿ ಮಾರಾಟದ ಹಣವನ್ನು ತಾನು ಚೆಕ್ ಮೂಲಕವೇ ಪಡೆಯುತ್ತೇನೆ ಎಂದು ಹೇಳಿಕೊಳ್ಳುತ್ತಾನೆ.
ಆದರೆ ದೇಶದಲ್ಲೇ ಮೂರನೇ ಒಂದರಷ್ಟು ಭಾಗ ಈರುಳ್ಳಿ ಬೆಳೆಯುವ ಈರುಳ್ಳಿಯ ಕೇಂದ್ರಸ್ಥಾನವೆಂದೇ ಜನಜನಿತವಾಗಿರುವ ಪಿಂಪಲ್‌ಗಾಂವ್‌ನ ಮಾರುಕಟ್ಟೆಯಲ್ಲಿ ತನ್ನ ಈರುಳ್ಳಿ ಮಾರುವ ದೀಪಕ್ ಮಾತ್ರ ಅಪನಗದೀಕರಣದಿಂದ ಮಾತ್ರ ಸಂತೋಷಗೊಂಡಿಲ್ಲ ಮತ್ತು ತಾನು ಸಂಪೂರ್ಣವಾಗಿ ಕ್ಯಾಶಲೆಸ್ ಆಗಬಲ್ಲೆ ಎಂಬುದನ್ನು ಆತ ನಂಬುವುದಿಲ್ಲ. ನವೆಂಬರ್ 9, 2916ರಂದು ರೂ. 500 ಮತ್ತು 1000ದ ಅಂದರೆ-ಚಲಾವಣೆಯಲ್ಲಿರುವ ಶೇ. 86 ಭಾರತೀಯ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ ಸರಕಾರ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಮತ್ತು ಡಿಜಿಟಲ್ ಪಾವತಿಗಳಿಗೆ ಒತ್ತುನೀಡಿತು. ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಹೊಂದಿರುವ ದೀಪಕ್ ಹಾಗೆ ನೋಡುವುದಾದರೆ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಒಗ್ಗಿಕೊಳ್ಳಬಹುದು, ಆದರೆ ವಾಸ್ತವದಲ್ಲಿ ಆತ ಇರುವ ಹಳ್ಳಿಯಲ್ಲಿ ಅಂತರ್ಜಾಲ ಸಂಪರ್ಕವೇ ಇಲ್ಲ, ಹಳ್ಳಿಗೆ ಸಮೀಪದ ಎಟಿಎಂ ಇರುವುದು 25 ಕಿ.ಮೀ. ದೂರದಲ್ಲಿ, ಸಮೀಪದ ರಾಷ್ಟ್ರೀಕೃತ ಬ್ಯಾಂಕ್ ಇರುವುದು 15 ಕಿ.ಮೀ. ದೂರದಲ್ಲಿ ಮತ್ತು ಆತ ಖಾತೆ ಹೊಂದಿರುವ ಜಿಲ್ಲಾ ಸಹಕಾರ ಬ್ಯಾಂಕ್ ಮೇಲೆ ಸದ್ಯ ಸರಕಾರ ನಿರ್ಬಂಧ ಹೇರಿದೆ.
2014ರ ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ ಭಾರತದ ಅತ್ಯಂತ ವ್ಯಸ್ತ ಈರುಳ್ಳಿ ಮಾರುಕಟ್ಟೆಯನ್ನು ಹೊಂದಿರುವ ಲಸಲ್‌ಗಾಂವ್ ಮತ್ತು ಪಂಪಲ್‌ಗಾಂವ್ ಎಂಬ ಎರಡು ಗ್ರಾಮಗಳನ್ನು ಹೊಂದಿರುವ ನಾಸಿಕ್ ಮಹಾರಾಷ್ಟ್ರದ ರಾಜ್ಯದ ಆಂತರಿಕ ಉತ್ಪನ್ನಕ್ಕೆ ಶೇ. 10.4 ಕಾಣಿಕೆ ನೀಡುತ್ತದೆ. ಇದು ಆ ರಾಜ್ಯದಲ್ಲಿ ಯಾವುದೇ ಕೃಷಿ ಆಧಾರಿತ ಜಿಲ್ಲೆಯು ನೀಡುವುದಕ್ಕಿಂತ ಹೆಚ್ಚಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಜೊತೆ ದೀಪಕ್‌ನ ಸೆಣಸಾಟ ಮತ್ತು ನಾಸಿಕ್‌ನ ಗ್ರಾಮೀಣ ಆರ್ಥಿಕತೆ ಮೇಲೆ ಅಪನಗದೀಕರಣ ಬೀರಿರುವಂತಹ ಪರಿಣಾಮ ಗ್ರಾಮೀಣ ಆರ್ಥಿಕತೆ ಮೇಲೆ ಅವಲಂಬಿತರಾಗಿರುವ ಭಾರತದ 800 ಮಿಲಿಯನ್ ಜನರು ನೋಟು ರದ್ದತಿಯಿಂದ ಕಳೆದ 35 ದಿನಗಳಲ್ಲಿ ಯಾವ ರೀತಿ ಪರಿಣಾಮಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ಗಂಟೆಗಟ್ಟಲೆ ನಿಂತರೂ ಕೈಗೆ ಸಿಗುವುದು...
ಭಾರತೀಯ ರಿಸರ್ವ್ ಬ್ಯಾಂಕ್ ದೀಪಕ್ ಖಾತೆ ಹೊಂದಿರುವ ನಾಸಿಕ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎನ್‌ಡಿಸಿಸಿ) ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹಳೆಯ ರದ್ದಾದ ನೋಟುಗಳ ಬದಲು ರೂ. 100 ಅಥವಾ ಹೊಸ ರೂ. 2000 ಅಥವಾ ರೂ. 500 ನೋಟುಗಳನ್ನು ನೀಡುವುದಕ್ಕೆ ತಡೆ ಹೇರಿದೆ. ದೀಪಕ್ ತನ್ನ ಬ್ಯಾಂಕ್ ಖಾತೆಯಲ್ಲಿ ರೂ. 21,000 ಜಮೆ ಮಾಡಿದ್ದ. ಇದರಿಂದ ಸ್ವಲ್ಪಹಣವನ್ನು ತೆಗೆದು ಕಾರ್ಮಿಕರಿಗೆ ವೇತನ ಪಾವತಿ ಮಾಡಬಹುದು, ಸಾಲಗಾರರಿಗೆ ಮರುಪಾವತಿ ಮಾಡಬಹುದು ಮತ್ತು ಸ್ವಲ್ಪಮನೆಯ ಖರ್ಚಿಗೆ ತೆಗೆಯಬಹುದು ಎಂಬುದು ಆತನ ಲೆಕ್ಕಾಚಾರವಾಗಿತ್ತು. ‘‘ಚೆಕ್ ಬ್ಯಾಂಕ್‌ನಲ್ಲಿ ಹಾಕಲಿಕ್ಕೇ ಎರಡು ವಾರಗಳು ಬೇಕಾಯಿತು’’ ಎಂದು ದೀಪಕ್ ಹೇಳುತ್ತಾನೆ. ‘‘ಅಲ್ಲಿಯವರೆಗೆ ನಾವು ಕಾಯಬೇಕಷ್ಟೇ.’’ ಹಣ ಬ್ಯಾಂಕ್ ಖಾತೆಯಲ್ಲಿ ಜಮೆಯಾದ ನಂತರವೂ ಅದನ್ನು ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ‘‘ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕು. ಆದರೂ ಕೈಗೆ ಸಿಗುವುದು ಬರೀ ರೂ. 2000 ಎಂದು ದೀಪಕ್ ಗೊಣಗುತ್ತಾನೆ. ಆತನ ಬಳಿ ಬೇರೆ ಯಾವುದೇ ಬ್ಯಾಂಕ್ ಖಾತೆ ಕೂಡಾ ಇಲ್ಲ. ಕೆಲಸಗಾರರ ವೇತನ ನೀಡಲು ರೂ. 4,500 ಮತ್ತು ತನ್ನ ಉತ್ಪನ್ನವನ್ನು ಹಳ್ಳಿಯಿಂದ ನೂರು ಕಿ.ಮೀ. ದೂರವಿರುವ ಪಿಂಪಲ್‌ಗಾಂವ್‌ಗೆ ಕೊಂಡೊಯ್ಯುವ ಮಿನಿ ಟ್ರಕ್‌ಗೆ ರೂ. 4,000 ಬಾಡಿಗೆ ಪಾವತಿಸಲು ಆತನಿಗೆ ಹಣದ ಆವಶ್ಯಕತೆಯಿತ್ತು. ಈಗೀಗ ಆತ ಮನೆಯ ಸಾಮಗ್ರಿಗಳನ್ನೂ ಸಾಲ ಮಾಡಿಯೇ ಕೊಂಡೊಯ್ಯುತ್ತಿದ್ದಾನೆ.
ಅನೇಕ ರೈತರಂತೆ ದೀಪಕ್ ಕೂಡಾ ಸಹಕಾರ ಬ್ಯಾಂಕ್ ಮೂಲಕ ವ್ಯವಹರಿಸುವವನು. ರಾಜ್ಯ ಸಹಕಾರಿ ಬ್ಯಾಂಕ್‌ಗಳ ರಾಷ್ಟ್ರೀಯ ಮಂಡಳಿಯ 2015ರ ವಾರ್ಷಿಕ ವರದಿಯ ಪ್ರಕಾರ ದೇಶಾದ್ಯಂತ ಈ ರೀತಿಯ 371 ಬ್ಯಾಂಕ್‌ಗಳ 1,40,000 ಶಾಖೆಗಳು 2.5 ಮಿಲಿಯನ್ ಖಾತೆದಾರರಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದೆ. ‘‘ನಾಸಿಕ್ ಜಿಲ್ಲೆಯ ಶೇ. 70 ರೈತರು ಎನ್‌ಡಿಸಿಸಿಯಲ್ಲಿ ಖಾತೆಯನ್ನು ಹೊಂದಿದ್ದಾರೆ ಮತ್ತು ಕೆಲವರಿಗಂತೂ ಬೇರೆ ಖಾತೆಯೇ ಇಲ್ಲ’’ ಎಂದು ಹೇಳುತ್ತಾರೆ ಎನ್‌ಡಿಸಿಸಿಯ ನಿರ್ದೇಶಕ ಮತ್ತು ಮಾಜಿ ಚೇರ್‌ಮ್ಯಾನ್ ಶಿರೀಶ್ ಕೊತ್ವಾಲ್.
‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಡಿಸೆಂಬರ್ 2016ರ ವರದಿಯಂತೆ ಆರ್‌ಬಿಐಯ ವ್ಯಾಪ್ತಿಗೆ ಬರದ ಜಿಲ್ಲಾ ಬ್ಯಾಂಕ್‌ಗಳ ಮೂಲಕ ಕಪ್ಪುಹಣವು ಮರಳಿ ವ್ಯವಸ್ಥೆಯಲ್ಲಿ ಸೇರಿಸಲು ಪ್ರಯತ್ನ ನಡೆಸಲಾಗುವುದು ಎಂಬ ಭಯ ಆರ್‌ಬಿಐಗಿದೆ. ರೂ. 500 ಮತ್ತು ರೂ. 1,000ರ ನೋಟುಗಳನ್ನು ಅಪಮೌಲ್ಯಗೊಳಿಸಿದ 72 ಗಂಟೆಗಳ ಒಳಗಾಗಿ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಎಂಟು ಪಟ್ಟು ಹೆಚ್ಚು ಹಳೆ ನೋಟುಗಳು ಜಮೆಯಾಗಿದ್ದವು.
ಒಬ್ಬನೇ ದುಡಿದು ಪರಿವಾರ ಸಾಕುತ್ತಿರುವ ದೀಪಕ್ ಬಳಿ ಯಾವುದೇ ವಾಹನವಿಲ್ಲ ಹಾಗಾಗಿ ತಾನು ಹತ್ತಿರದ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಬಯಸಿದ. ರಾಷ್ಟ್ರೀಕೃತ ಬ್ಯಾಂಕ್ ಆತನ ಹಳ್ಳಿಯಿಂದ 15 ಕಿ.ಮೀ. ದೂರವಿದ್ದರೆ ಸಹಕಾರಿ ಬ್ಯಾಂಕ್ 10 ಕಿ.ಮೀ. ದೂರವಿದೆ.
ಕಳಪೆ ಅಂತರ್ಜಾಲ ಸಂಪರ್ಕ
ಯಾವ ರೀತಿ ಶೇ. 83 ಭಾರತೀಯರು ಸ್ಮಾರ್ಟ್‌ಫೋನ್ ಹೊಂದಿಲ್ಲವೋ ಅದೇ ರೀತಿ ದೀಪಕ್‌ನ ಮೊಬೈಲ್ ಫೋನ್‌ನಲ್ಲಿ ಕೂಡಾ ಅಂತರ್ಜಾಲ ಸಂಪರ್ಕವಿಲ್ಲ. ನಿಮ್ಮ ಬಳಿ ಎಟಿಎಂ ಕಾರ್ಡ್ ಇದೆಯೇ ಎಂದು ಕೇಳಿದಾಗ ಆತ ನಗುತ್ತಾ ‘‘ಹತ್ತಿರ ಎಟಿಎಂ ಇರುವುದು 40 ಕಿ.ಮೀ. ದೂರದಲ್ಲಿ’’ ಅಂದ. (ಇಂಡಿಯಾ ಸ್ಪೆಂಡ್ ಕಂಡುಕೊಂಡಂತೆ ಸಮೀಪದ ಎಟಿಎಂ 25 ಕಿ.ಮೀ. ದೂರದಲ್ಲಿದೆ ಆದರೆ ಅದು ಕೆಲಸ ಮಾಡುತ್ತದೆಯೇ ಎಂಬುದು ಖಾತರಿಯಿಲ್ಲ).
ಅರ್ಧಕ್ಕಿಳಿದ ಈರುಳ್ಳಿ ಬೆಳೆ, ಗ್ರಾಮೀಣ ಆರ್ಥಿಕತೆಗೆ ಆಘಾತ
ಏಶ್ಯಾದ ಬೃಹತ್ ಈರುಳ್ಳಿ ಮಾರುಕಟ್ಟೆ ಲಸಲ್‌ಗಾಂವ್‌ಗೆ ಟ್ರಕ್‌ಗಳಲ್ಲಿ ಈರುಳ್ಳಿ ಬಂದು ಬೀಳಲಾರಂಭಿಸುತ್ತದೆ. ವ್ಯಾಪಾರಿಗಳು ಈರುಳ್ಳಿಯ ದರ ನಿಗದಿಪಡಿಸುತ್ತಿದ್ದಂತೆ ರೈತರು ಮಾರುಕಟ್ಟೆಯ ಬದಿಯಲ್ಲಿ ನಿಂತು ನೋಡುತ್ತಿರುತ್ತಾರೆ. ‘‘ನೋಟು ರದ್ದತಿಯ ನಂತರ ಈರುಳ್ಳಿ ದರ ಅರ್ಧಕ್ಕೆ ಇಳಿದಿದೆ’’ ಎನ್ನುತ್ತಾನೆ ದೀಪಕ್.
ನೋಟು ರದ್ದತಿಯ ವಾರದ ಮೊದಲು ಪ್ರತಿ ಕ್ವಿಂಟಾಲ್ ರೂ. 1,000-1,200ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ರೂ. 600-700 ಪ್ರತಿ ಕ್ವಿಂಟಾಲ್ ಮಾರಾಟವಾಗುತ್ತಿದೆ. ನೋಟು ರದ್ದತಿಯ ನಂತರ ಹತ್ತು ದಿನಗಳ ಕಾಲ ಮಾರುಕಟ್ಟೆಯಲ್ಲಿ ಹಣದ ಅಭಾವದಿಂದ ಹರಾಜು ನಡೆದಿರಲಿಲ್ಲ. ಮಾರುಕಟ್ಟೆಯಲ್ಲಿ ಶೇಖರಿಸಿಟ್ಟಿದ್ದ ಈರುಳ್ಳಿ ಮಾರಾಟವಾಗದೆ ಹಾಗೆಯೇ ಉಳಿಯಿತು ಮತ್ತು ಪುನಃ ಮಾರುಕಟ್ಟೆ ತೆರೆದಾಗ ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸಿದ ಪರಿಣಾಮ ದರ ಇಳಿಮುಖ ಕಂಡಿತು.
ಕೆಂಪು ಈರುಳ್ಳಿಯನ್ನು ಹತ್ತು ದಿನಕ್ಕಿಂತ ಹೆಚ್ಚುಕಾಲ ಇಡಲು ಸಾಧ್ಯವಾಗದ ಕಾರಣ ರೈತರು ಬೇರೆ ದಾರಿಯಿಲ್ಲದೆ ಸಿಕ್ಕ ಮೊತ್ತಕ್ಕೆ ತಮ್ಮ ಬೆಳೆಯನ್ನು ಮಾರಾಟ ಮಾಡಿದರು.
ಇನ್ನು ಸಣ್ಣಮಟ್ಟದ ರೈತನಾಗಿರುವ ಮಾಧವರಾವ್ ತೋರಟ್ ಮುಂಬೈಯಿಂದ 200 ಕಿ.ಮೀ. ದೂರದಲ್ಲಿರುವ ದೇವ್‌ಗಾಂವ್‌ನಲ್ಲಿರುವ ತನ್ನ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡುತ್ತಿರುವ ಕಾರಣ ಆತನ ಬಳಿ ಬ್ಯಾಂಕ್ ಹೊರಗಡೆ ಸರತಿ ಸಾಲಿನಲ್ಲಿ ನಿಲ್ಲಲು ಕೂಡಾ ಸಮಯವಿಲ್ಲ. ಆತನ ಗ್ರಾಮದಿಂದ ರಾಷ್ಟ್ರೀಕೃತ ಬ್ಯಾಂಕ್ 8 ಕಿ.ಮೀ. ದೂರವಿದ್ದರೆ ಎಟಿಎಂ 15 ಕಿ.ಮೀ. ದೂರದಲ್ಲಿದೆ. ಹಣದ ಕೊರತೆಯ ಕಾರಣದಿಂದಾಗಿ ಆತ ತನ್ನ ಕೆಲಸಗಾರರ ಸಂಬಳವನ್ನೂ ಪಾವತಿಸಿಲ್ಲ.
ಈ ವರ್ಷ ಉತ್ತಮ ಮುಂಗಾರು ಮಳೆಯಾದ ಪರಿಣಾಮವಾಗಿ ಈರುಳ್ಳಿ ಬೆಳೆ ಕೂಡಾ ಉತ್ತಮವಾಗಿದ್ದು ಇದು ಕೂಡಾ ಬೆಲೆ ಇಳಿಕೆಗೆ ಕಾರಣವಾಗಿದೆ.
ದರದಲ್ಲಿ ಇಳಿಕೆಯು ಮುಖ್ಯವಾಗಿ ದೀಪಕ್‌ನಂತೆ ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ರೈತರಿಗೆ ಸಮಸ್ಯೆಯನ್ನೊಡ್ಡುತ್ತದೆ. ಮಹಾರಾಷ್ಟ್ರದ ಜಮೀನುದಾರರಲ್ಲಿ ಶೇ.78.6 ಇಂತಹ ರೈತರಿದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿರುವ ದೀಪಕ್ ಈರುಳ್ಳಿ ಬೆಲೆಯಿಳಿಕೆಯಿಂದ ಈ ಬಾರಿ ರೂ. 30,000 ನಷ್ಟ ಅನುಭವಿಸಿದ್ದಾರೆ. ‘‘ನಮ್ಮಂತಹ ಸಣ್ಣ ರೈತರು ಕೃಷಿ ಮಾಡುವುದೇ ಕಷ್ಟವಾಗಿದೆ’’ ಎನ್ನುತ್ತಾನೆ ದೀಪಕ್.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಾರ ಕಳೆದ ವರ್ಷ ಎಪ್ರಿಲ್ ಮತ್ತು ಆಗಸ್ಟ್ ತಿಂಗಳ ಮಧ್ಯದಲ್ಲಿ ನಾಸಿಕ್ ಜಿಲ್ಲೆಯ ಸುತ್ತಮುತ್ತಲ ರೈತರು 0.4 ಮಿಲಿಯನ್ ಮೆಟ್ರಿಕ್ ಟನ್ ಈರುಳ್ಳಿಯನ್ನು ಲಸಲ್‌ಗಾಂವ್ ಈರುಳ್ಳಿ ಮಾರುಕಟ್ಟೆಗೆ ತಂದಿದ್ದರು. ಈ ವರ್ಷ ಅದೇ ಅವಧಿಯಲ್ಲಿ ಈ ಪ್ರಮಾಣ ಶೇ. 150 ಹೆಚ್ಚಾಗಿ ಒಂದು ಮಿಲಿಯನ್ ಮೆಟ್ರಿಕ್ ಟನ್ ಈರುಳ್ಳಿ ಲಸಲ್‌ಗಾಂವ್ ಮಾರುಕಟ್ಟೆಗೆ ಬಂದಿದೆ.
ಲಸಲ್‌ಗಾಂವ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಏಷ್ಯಾದ ಬೃಹತ್ ಈರುಳ್ಳಿ ಮಾರುಕಟ್ಟೆಯಾಗಿದ್ದು ಭಾರತದ ಬಹುತೇಕ ಈರುಳ್ಳಿ ಇಲ್ಲಿಂದಲೇ ರಫ್ತಾಗುತ್ತದೆ. ‘‘ಕರ್ನಾಟಕ ಮತ್ತು ಹರ್ಯಾಣ ರಾಜ್ಯಗಳಲ್ಲೂ ಉತ್ತಮ ಈರುಳ್ಳಿ ಬೆಳೆಯಾಗಿದ್ದು ಇದು ಕೂಡಾ ಬೇಡಿಕೆ ಕುಂದುವಂತೆ ಮಾಡಿದೆ’’ ಎಂದು ಹೇಳುತ್ತಾರೆ ಲಸಲ್‌ಗಾಂವ್ ಎಪಿಎಂಸಿಯ ಅಕೌಂಟೆಂಟ್ ಎನ್‌ಎಸ್ ವದವ್ನೆ.
ನಾನು ಕೃಷಿ ಬಿಡಬೇಕೆಂದಿದ್ದೇನೆ...
ಇಂಡಿಯಾಸ್ಪೆಂಡ್ 2015ರ ಮಾರ್ಚ್‌ನಲ್ಲಿ ವರದಿ ಮಾಡಿರುವಂತೆ ಕಳೆದ ಕೆಲವು ವರ್ಷಗಳಲ್ಲಿ ವೆಚ್ಚವು ಮೂರುಪಟ್ಟು ಹೆಚ್ಚಾಗಿರುವ ಕಾರಣ ಲಾಭ ಬಹಳಷ್ಟು ಕಡಿಮೆಯಾಗಿದೆ. ನೋಟು ರದ್ದತಿಯಿಂದ ಮತ್ತು ಬೆಲೆಯಿಳಿಕೆಯಿಂದ ಉಂಟಾಗಿರುವ ಹಣದ ಕೊರತೆಯಿಂದ ದೀಪಕ್ ಕೃಷಿಯನ್ನೇ ತ್ಯಜಿಸಲು ಮುಂದಾಗಿದ್ದಾನೆ. ‘‘ಆಯ್ಕೆಯನ್ನು ನೀಡುವುದಾದರೆ ನಾನು ವಲಸೆ ಹೋಗಿ ಒಂದು ಕೆಲಸಕ್ಕೆ ಸೇರಲು ಬಯಸುತ್ತೇನೆ. ಕೃಷಿ ನಷ್ಟವನ್ನುಂಟು ಮಾಡುವ ವ್ಯವಹಾರವಾಗಿದೆ’’ ಎಂದು ಕಾಲೇಜು ದಾಖಲಾತಿಗೆ ಪಡೆದರೂ ಒಮ್ಮೆಯೂ ಕಲಾ ವಿಭಾಗದಲ್ಲಿ ಡಿಗ್ರಿಯನ್ನು ಸಂಪೂರ್ಣ ಮಾಡದ ದೀಪಕ್ ಹೇಳುತ್ತಾನೆ. ಆತನ ಪತ್ನಿ ಶಿಕ್ಷಣದಲ್ಲಿ ಡಿಪ್ಲೊಮಾ ಹೊಂದಿದ್ದರೂ ನಿರುದ್ಯೋಗಿಯಾಗಿದ್ದಾರೆ. ‘‘ಸದ್ಯಕ್ಕೆ ನಾನು ನನ್ನ ಕಿರಿಯ ಸಹೋದರನಿಗೆ ಒಂದಷ್ಟು ನೆರವಾಗಬೇಕಿರುವುದರಿಂದ ನನ್ನಲ್ಲಿ ಬೇರೆ ಆಯ್ಕೆಯಿಲ್ಲ. ಆದರೆ ಆದಷ್ಟು ಬೇಗ ನಾನು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಸೇರಿಕೊಳ್ಳುತ್ತೇನೆ’’ ಎನ್ನುತ್ತಾನೆ ದೀಪಕ್ ಪಾಟೀಲ್.
ಕೃಪೆ: indiaspend.com







