ನನಗೆ ಗೃಹ ಬಂಧನ ವಿಧಿಸಲಾಗಿದೆ: ಸಂಜಯ್ ನಿರುಪಂ
ಮುಂಬೈ, ಡಿ.24: ಪೊಲೀಸರು ತನ್ನನ್ನು 'ಗೃಹ ಬಂಧನದಲ್ಲಿ' ಇರಿಸಿದ್ದಾರೆಂದು ಮುಂಬೈ ಕಾಂಗ್ರೆಸ್ ವರಿಷ್ಠ ಸಂಜಯ್ ನಿರುಪಂ ಇಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ನಡೆಸಲಿರುವ ಮುಂಬೈಯ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿ ಅವರು ಪಕ್ಷದ ಕಾರ್ಯಕರ್ತರ 'ವೌನ ಮೆರವಣಿಗೆ'ಯ ನೇತೃತ್ವ ವಹಿಸಲಿದ್ದರೆನ್ನಲಾಗಿದೆ.
ತನ್ನ ಮನೆಯ ಹೊರ ವಲಯದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಇದೆ. ತನಗೆ ಮನೆಯಿಂದ ಹೊರಗೆ ಕಾಲಿಡಲು ಬಿಡುತ್ತಿಲ್ಲ. ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕರನ್ನು ಅಕ್ಷರಶಃ ಗೃಹ ಬಂಧನದಲ್ಲಿರಿಸಲಾಗುತ್ತಿದೆಯೆಂದು ಸಂಜಯ್ ಪಿಟಿಐಗೆ ದೂರಿದ್ದಾರೆ.
ಆದರೆ, ಅವರ ಪ್ರತಿಪಾದನೆಯನ್ನು ಮುಂಬೈ ಪೊಲೀಸರು ತಳ್ಳಿ ಹಾಕಿದ್ದು, ಸಂಜಯ್ ನಿರುಪಮ್‌ರ ಮನೆಯ ಹೊರಗೆ ಪೊಲೀಸರ ನಿಯೋಜನೆಯು ಕೇವಲ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಮಾಡಿರುವ ಭದ್ರತಾ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದಿದ್ದಾರೆ.
ಪ್ರಧಾನಿ ಭೇಟಿಯ ವೇಳೆ ಕಾನೂನು-ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅನಪೇಕ್ಷಿತ ಘಟನೆಯನ್ನು ತಡೆಯಲು ಮುಖ್ಯವಾಗಿ ಅವರ ವೈಹಾಳಿ ಸಂಚರಿಸುವ ಮಾರ್ಗ ಸೇರಿದಂತೆ ನಗರಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆಯೆಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಅಶೋಕ್ ದೂಧೆ ತಿಳಿಸಿದ್ದಾರೆ.
ಕಾಂಗ್ರೆಸ್‌ನ ಮೆರವಣಿಗೆಯು ನಿಗದಿಯಂತೆ ನಡೆಯಲಿದೆ. ಕಾರ್ಯವ್ಯೆಹವನ್ನು ನಿರ್ಧರಿಸಲು ತಮಗೆ ಇಂದು ಅಪರಾಹ್ನದವರೆಗೆ ಸಮಯವಿದೆಯೆಂದು ಸಂಜಯ್ ಹೇಳಿದ್ದಾರೆ.
ಪ್ರಧಾನಿಗೆ ತಮ್ಮ ಹಲವು ಪ್ರಶ್ನೆಗಳಿವೆ. ಕಾಂಗ್ರೆಸ್ ಉಪಾಧ್ಯಾಕ್ಷ ರಾಹುಲ್ ಗಾಂಧಿಯವರನ್ನು ಪರಿಹಾಸ್ಯ ಮಾಡುವ ಬದಲು ಲಂಚ ಆರೋಪದ ಬಗ್ಗೆ ಅವರು ಉತ್ತರಿಸಲಿ. ತಮ್ಮ ಬೆವರಿನ ಗಳಿಕೆಯನ್ನು ಬ್ಯಾಂಕ್‌ಗಳಲ್ಲಿರಿಸಲು ಹಾಗೂ ಹಿಂದೆಗೆಯಲು ಜನರಿಗೆ ಯಾವಾಗ ಹಕ್ಕು ಸಿಗುತ್ತದೆಂಬುದನ್ನು ಮೋದಿ ತಿಳಿಸಬೇಕು. ಒಂದು ತಿಂಗಳ ಮೇಲಾಗಿದೆ. ನೋಟು ರದ್ದತಿಯ ಬಳಿಕ ನಾಗರಿಕರು ನಗದು ಕೊರತೆಯಿಂದ ಈಗಲೂ ಕಷ್ಟಪಡುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.





