ಸೂಕ್ಷ್ಮ ಮಿಲಿಟರಿ ದಾಖಲೆಗಳ ಸಹಿತ ಭಾರತದಿಂದ ಪರಾರಿಯಾದ ಶಸ್ತ್ರಾಸ್ತ್ರ ಡೀಲರ್
ಈತನ ಪಾಸ್‌ಪೋರ್ಟ್ ಜಪ್ತಿಯಾಗಿತ್ತು!

ಹೊಸದಿಲ್ಲಿ, ಡಿ.25: ಸೂಕ್ಷ್ಮ ಮಿಲಿಟರಿ ದಾಖಲೆಗಳ ಸಹಿತ ಭಾರತದಿಂದ ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿ ಪರಾರಿಯಾಗಿರುವುದು ದೇಶದ ತನಿಖಾ ಏಜೆನ್ಸಿಗಳ ಪಾಲಿಗೆ ಆಘಾತ ತಂದಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಆತನ ಪಾಸ್‌ಪೋರ್ಟ್ ಅನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿತ್ತು.
ದಿಲ್ಲಿ ಪೊಲೀಸರು, ಕಾನೂನು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಈ ಬೆಳವಣಿಗೆ ಬಗ್ಗೆ ಚಿಂತಿತರಾಗಿದ್ದಾರೆ. ಭಂಡಾರಿ ಎಲ್ಲಿರಬಹುದು ಎಂಬ ಬಗ್ಗೆ ಅಂದಾಜು ಮಾಡುವ ಪ್ರಕ್ರಿಯೆ ಇದೀಗ ನಡೆಯುತ್ತಿದೆ. ಇವರು ನೇಪಾಳ ಮೂಲಕ ಕಳೆದ ವಾರ ಲಂಡನ್ ತಲುಪಿರುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗದ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.
"ಅವರ ಬಳಿ ಪಾಸ್‌ಪೋರ್ಟ್ ಇರಲಿಲ್ಲ. ಅಂದರೆ ಅವರು ಲಂಡನ್‌ಗೆ ಹಾರಿರಬೇಕು. ಬೇರೆ ಗುರುತುಪತ್ರ ನೀಡಿ, ನಕಲಿ ಪಾಸ್‌ಪೋರ್ಟ್ ಪಡೆದಿರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಭಂಡಾರಿ ಯಾವುದೇ ಭಿನ್ನ ಹೆಸರಿನಿಂದ ದೇಶ ಬಿಟ್ಟಿಲ್ಲ ಎನ್ನುವುದು ಇಮಿಗ್ರೇಶನ್ ವಿಭಾಗದ ಅಧಿಕಾರಿಗಳ ಹೇಳಿಕೆ.
ಏಜೆನ್ಸಿಗಳು ಇದೀಗ ಆತನ ಪತ್ತೆಗೆ ಅಂತಾರಾಷ್ಟ್ರೀಯ ಸಹಕಾರವನ್ನು ಬಯಸಿದ್ದಾರೆ. ಇವರು ಕಠ್ಮಂಡುವಿನಿಂದ ಲಂಡನ್‌ಗೆ ಹಾರಿರಬೇಕೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸಹಾಯ ಕೋರಲಾಗಿದೆ. ಈಗ ಅಂದಾಜಿಸಿರುವಂತೆ ಭಂಡಾರಿ, ಲಂಡಗನ್ ತಲುಪಿದ್ದರೆ, ಆತನ ಗಡೀಪಾರಿಗೆ ರಾಜತಾಂತ್ರಿಕ ಪ್ರಯತ್ನ ಆರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ.







