ಬೇನಾಮಿ ಆಸ್ತಿಗಳ ವಿರುದ್ಧ ಶೀಘ್ರವೇ ಕಾನೂನು:ಪ್ರಧಾನಿ ಮೋದಿ
‘ಮನ್ ಕಿ ಬಾತ್’ ನಲ್ಲಿ ಮೋದಿ

ಹೊಸದಿಲ್ಲಿ,ಡಿ.25: ನೋಟು ರದ್ದತಿಯ ಬಳಿಕ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಟವನ್ನು ಮುಂದುವರಿಸಲು ರವಿವಾರ ಪಣ ತೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು, ಬೇನಾಮಿ ಆಸ್ತಿಗಳ ವಿರುದ್ಧ ಪರಿಣಾಮಕಾರಿ ಕಾನೂನೊಂದನ್ನು ಸರಕಾರವು ಶೀಘ್ರವೇ ತರಲಿದೆ ಮತ್ತು ಇದು ಆರಂಭ ಮಾತ್ರ ಆಗಿದೆ ಎಂದು ಹೇಳಿದರು.
ಆಕಾಶವಾಣಿ ಮೂಲಕ ತನ್ನ ಈ ವರ್ಷದ ಕೊನೆಯ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ ಮೋದಿ, ನೋಟು ರದ್ದತಿ ಬಳಿಕ ನಿಯಮಗಳಲ್ಲಿ ಆಗಾಗ್ಗೆ ಬದಲಾವಣೆ ಗಳನ್ನು ಸಮರ್ಥಿಸಿಕೊಂಡರು. ಜನರ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ತನ್ನ ಸರಕಾರದ ಹೋರಾಟವನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದ ಶಕ್ತಿಗಳನ್ನು ಮಟ್ಟಹಾಕಲು ಈ ಬದಲಾವಣೆಗಳನ್ನು ಮಾಡಲಾಗಿತ್ತು ಎಂದರು.
ಭ್ರಷ್ಟಾಚಾರದ ವಿರುದ್ಧ ಯುದ್ಧವನ್ನು ಯಶಸ್ವಿಯಾಗಿಸಲು ಸಾರ್ವಜನಿಕರ ಸಹಕಾರವನ್ನು ಕೋರಿದ ಅವರು, ಕಾಳಧನಿಕರ ಕುರಿತು ಮಾಹಿತಿಗಳನ್ನು ನೀಡುತ್ತಿರುವ ಜನಸಾಮಾನ್ಯರ ಬೆಂಬಲದೊಂದಿಗೆ ಮಾತ್ರ ಕೆಲವರ ತಪ್ಪುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ ಎಂದರು.
ಇದು ಅಂತ್ಯವಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಇದು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟದ ಆರಂಭ ಮಾತ್ರ.ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಯುದ್ಧವನ್ನು ನಾವು ಗೆಲ್ಲಲೇಬೇಕು. ಯುದ್ಧವನ್ನು ನಿಲ್ಲಿಸುವ ಅಥವಾ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಹೇಳಿದರು
ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ವ್ಯರ್ಥಗೊಳಿಸಿದ ಬಿಕ್ಕಟ್ಟಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಉಭಯ ಸದನಗಳು ಉತ್ತಮವಾಗಿ ನಡೆದಿದ್ದರೆ ನೋಟು ರದ್ದತಿ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಕುರಿತು ಒಳ್ಳೆಯ ಚರ್ಚೆಯನ್ನು ತಾನು ಬಯಸಿದ್ದೆ ಎಂದರು.
ರಾಜಕೀಯ ಪಕ್ಷಗಳು ಎಲ್ಲ ರಿಯಾಯಿತಿಗಳು ಮತ್ತು ವಿನಾಯಿತಿಗಳನ್ನು ಅನುಭವಿ ಸುತ್ತಿವೆ ಎಂದು ಕೆಲವರು ವದಂತಿಗಳನ್ನು ಹರಡುತ್ತಿದ್ದು, ಇವು ಸುಳ್ಳಾಗಿವೆ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು. ವ್ಯಕ್ತಿಗಳು,ಸಂಸ್ಥೆಗಳು ಅಥವಾ ರಾಜಕೀಯ ಪಕ್ಷಗಳಾಗಿರಲಿ...ಎಲ್ಲರೂ ಕಾನೂನಿಗೆ ವಿಧೇಯರಾಗಿರಬೇಕಾಗುತ್ತದೆ ಎಂದು ಮೋದಿ ಹೇಳಿದರು.







