ಕಪ್ಪುಸಮುದ್ರದಲ್ಲಿ ರಶ್ಯಸೇನಾಪಡೆ ವಿಮಾನ ಪತನ: ಬದುಕುಳಿದವರ ಸುಳಿವಿಲ್ಲ

ಸೋಚಿ, ಡಿ.25: ಅರವತ್ತಕ್ಕೂ ಅಧಿಕ ಮಂದಿಯಿದ್ದ ಸಂಗೀತಗಾರರ ತಂಡ ಹಾಗೂ 9 ಪತ್ರಕರ್ತರು ಸೇರಿದಂತೆ 91 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಶ್ಯ ಸೇನಾಪಡೆಗೆ ಸೇರಿರುವ ವಿಮಾನ ಕಪ್ಪು ಸಮುದ್ರದಲ್ಲಿ ಪತನಗೊಂಡಿರುವ ಜಾಗದಲ್ಲಿ ಯಾರೂ ಬದುಕುಳಿದಿರುವ ಕುರುಹುಗಳಿಲ್ಲ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಟಿಯು-154 ವಿಮಾನ ಪತನಗೊಂಡ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಸಮುದ್ರದಿಂದ ನಾಲ್ಕು ಮೃತದೇಹವನ್ನು ಹೊರ ತೆಗೆಯಲಾಗಿದೆ. ಯಾರೂ ಬದುಕುಳಿದಿರುವ ಸುಳಿವು ಕಾಣುತ್ತಿಲ್ಲ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಸಿರಿಯಾಕ್ಕೆ ತೆರಳುತ್ತಿದ್ದ ವಿಮಾನ ಪತನಗೊಂಡಿರುವ ಘಟನೆಯ ಬಗ್ಗೆ ತೀವ್ರ ದುಃಖವ್ಯಕ್ತಪಡಿಸಿರುವ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಘಟನೆಯ ಬಗ್ಗೆೆ ಸಮಗ್ರ ತನಿಖೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ.
ಸೋಚಿಯಲ್ಲಿ ಟಿಯು-154 ವಿಮಾನ ಪತನಗೊಂಡ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಮಂತ್ರಿ ಡಿಮಿಟ್ರಿ ಮೆಡ್ವಿಡೆವ್‌ಗೆ ಸೂಚಿಸಿರುವ ಪುತಿನ್ ತನಿಖೆಗೆ ರಾಜ್ಯ ಆಯೋಗವನ್ನು ರಚಿಸಲು ಸೂಚಿಸಿದ್ದಾರೆ.
ರಶ್ಯಾದ ಮಿಲಿಟರಿ ವಿಮಾನ ಟಿಯು-154 ಸೋಚಿಯ ಅಡ್ಲೆರ್ ಸಿಟಿಯಿಂದ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ರ್ಯಾಡರ್ ಸಂಪರ್ಕ ಕಡಿದುಕೊಂಡು ನಿಗೂಢವಾಗಿ ನಾಪತ್ತೆಯಾಗಿತ್ತು.
82 ಪ್ರಯಾಣಿಕರು ಹಾಗೂ 10 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಟಿಯು-154 ವಿಮಾನ ರಶ್ಯಾದ ಸೋಚಿಯಿಂದ ಸಿರಿಯಾದ ಲಟಾಕಿಯಾಗೆ ತೆರಳುತ್ತಿತ್ತು. ವಿಮಾನ ಟೇಕ್-ಆಫ್ ಆದ 20 ನಿಮಿಷಗಳಲ್ಲಿ ರ್ಯಾಡರ್ ಸಂಪರ್ಕ ಕಡಿತಗೊಂಡಿತ್ತು ಎಂದು ರಶ್ಯದ ನ್ಯೂಸ್ ಏಜೆನ್ಸಿ ಟಿಎಎಸ್‌ಎಸ್‌ಗೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಿರಿಯಾದ ಲಟಾಕಿಯದಲ್ಲಿರುವ ರಶ್ಯದ ಸೇನಾನೆಲೆಯಲ್ಲಿ ನ್ಯೂ ಇಯರ್ ಕಾರ್ಯಕ್ರಮ ನೀಡಲು ಮಿಲಿಟರಿ ಮ್ಯೂಸಿಕ್ ಬ್ಯಾಂಡ್‌ನ 60ಕ್ಕೂ ಅಧಿಕ ಸದಸ್ಯರು ಹಾಗೂ 9 ವರದಿಗಾರರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ರಶ್ಯದ ಟಿವಿ ಚಾನಲ್‌ವೊಂದು ತಿಳಿಸಿದೆ.





