ವಿದೇಶಾಂಗ ವ್ಯವಹಾರಗಳ ಸಚಿವಾಲಯದ ‘ಟ್ವಿಟರ್ ಸೇವಾ ’ಕ್ಕೆ ಚಾಲನೆ

ಹೊಸದಿಲ್ಲಿ,ಡಿ.25: ವಿದೇಶಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ಭಾರತೀಯರಿಗೆ ನೆರವಾಗಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಆಗಾಗ್ಗೆ ಟ್ವಿಟರ್ ಬಳಸುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ಅವರ ಸಚಿವಾಲಯ ಜನರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಸಲ್ಲಿಸಲು ‘ಟ್ವಿಟರ ಸೇವಾ ’ ಆರಂಭಿಸಿದೆ. ಇದರ ಮೂಲಕ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯ ಭಾರತೀಯ ರಾಯಭಾರಿ ಕಚೇರಿ ಅಥವಾ ತಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಅತ್ಯಂತ ಶೀಘ್ರವಾಗಿ ನೆರವು ಪಡೆಯಬಹುದಾಗಿದೆ.
ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು ಚಾಲನೆ ನೀಡಿದ ಈ ನೂತನ ಸೇವೆಯು ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲ ಟ್ವಿಟರ್ ಹ್ಯಾಂಡಲ್‌ಗಳ ಸಂಯುಕ್ತ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು.
ಟ್ವಿಟರ್ ಸೇವಾ ವಿದೇಶಗಳಲ್ಲಿರುವ 198 ಭಾರತೀಯ ರಾಯಭಾರಿ ಕಚೇರಿಗಳು, 29 ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು ಮತ್ತು ಇತರ ಹ್ಯಾಂಡಲ್‌ಗಳು ಸೇರಿದಂತೆ 200 ಕ್ಕೂ ಅಧಿಕ ಸಾಮಾಜಿಕ ಮೀಡಿಯಾ ಹ್ಯಾಂಡಲ್‌ಗಳನ್ನು ಒಂದೇ ವೇದಿಕೆಗೆ ತರುತ್ತದೆ.
ಈಗ ಸಮಸ್ಯೆಯಲ್ಲಿ ಸಿಲುಕಿರುವ ಭಾರತೀಯರು ಸಚಿವಾಲಯದ ಯಾವುದೇ ಟ್ವಿಟರ್ ಖಾತೆಗೆ ಕಳುಹಿಸುವ ಸಂದೇಶಗಳು ನೇರವಾಗಿ ಟ್ವಿಟರ್ ಸೇವಾ ವೇದಿಕೆಯನ್ನು ತಲುಪಲಿವೆ ಮತ್ತು ತನ್ಮೂಲಕ ದೂರುಗಳಿಗೆ ತ್ವರಿತ ಪರಿಹಾರ ದೊರೆಯಲಿದೆ.
ದೇಶದಲ್ಲಿ ಮತ್ತು ವಿದೇಶಗಳಲ್ಲಿರುವ ಭಾರತೀಯರಿಗೆ ಸೇವೆ ಸಲ್ಲಿಸುವ ಸಚಿವಾಲಯದ ಬದ್ಧತೆಯು ಹೆಚ್ಚಿದ್ದು, ಈ ನಿಟ್ಟಿನಲ್ಲಿ ಸಕಾಲಿಕ ಮತ್ತು ಪಾರದರ್ಶಕ ರೀತಿಯಲ್ಲಿ ಹೊಸ ದಾಪುಗಾಲು ಇಡಲು ಈಗ ಸಾಧ್ಯವಾಗಲಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.







