ಸರಬ್‌ಜಿತ್ ಸಿಂಗ್ ಸೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆ

ಹೊಸದಿಲ್ಲಿ,ಡಿ.25: ಪಾಕಿಸ್ತಾನದಲ್ಲಿ ಮರಣ ದಂಡನೆ ವಿಧಿಸಲ್ಪಟ್ಟಿದ್ದ ಸರಬ್‌ಜಿತ್ ಸಿಂಗ್ ಸೋದರ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಂಜಾಬಿನ ರೈತ ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನದ ನ್ಯಾಯಾಲಯವು ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಮರಣ ದಂಡನೆಯನ್ನು ವಿಧಿಸಿತ್ತು. ತಾನು ಅಮಾಯಕ,ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿದ್ದೆ ಎಂಬ ಆತನ ಮೊರೆ ನ್ಯಾಯದೇವತೆಗೆ ಕೇಳಿಸಿರಲಿಲ್ಲ. ಲಾಹೋರಿನ ಜೈಲಿನಲ್ಲಿ ಸಹಕೈದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಸರಬ್‌ಜಿತ್ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
ಸರಬ್‌ಜಿತ್ ಬಿಡುಗಡೆಗಾಗಿ ದಲ್ಬೀರ್ ತೀವ್ರ ಹೋರಾಟವನ್ನು ನಡೆಸಿದ್ದರು. ಪರಿಣಾಮವಾಗಿ ಆತನ ಮರಣ ದಂಡನೆ ಜಾರಿಯನ್ನು ಮುಂದೂಡಲಾಗಿತ್ತಾದರೂ, ಜೈಲುವಾಸ ಅಂತ್ಯಗೊಂಡಿರಲಿಲ್ಲ.
ಸರಬ್‌ಜಿತ್ ಕಥೆಯನ್ನು ಆಧರಿಸಿದ ಅದೇ ಹೆಸರಿನ ಚಿತ್ರ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಐಶ್ವರ್ಯಾ ರೈ ದಲ್ಬೀರ್ ಪಾತ್ರವನ್ನು ಮತ್ತು ರಣದೀಪ್ ಹೂಡಾ ಸರಬ್‌ಜಿತ್ ಪಾತ್ರವನ್ನು ನಿರ್ವಹಿಸಿದ್ದರು.





