ಪುತ್ತೂರು : ಕೊನೆಗೂ ಕಿಲ್ಲೆ ಮೈದಾನದಲ್ಲಿ ನಡೆದ ‘ವಾರದ ಸಂತೆ’
ಕೆಲವು ವ್ಯಾಪಾರಿಗಳಿಗೆ ಸ್ಥಳಾವಕಾಶದ ಕೊರತೆ, ಗೊಂದಲವಿಲ್ಲದೆ ಖರೀದಿಸಿದ ಗ್ರಾಹಕರು

ಪುತ್ತೂರು, ಡಿ.25 : ಕಳೆದ 4 ತಿಂಗಳಿನಿಂದ ಗೊಂದಲದ ಗೂಡಾಗಿದ್ದ ಪುತ್ತೂರು ವಾರದ ಸಂತೆ ವಿಚಾರಕ್ಕೆ ಇದೀಗ ತೆರೆ ಬಿದ್ದಂತಾಗಿದೆ. ಹಲವಾರು ಹೇಳಿಕೆಗಳು, ಪ್ರತಿ ಹೇಳಿಕೆಗಳು, ಪ್ರತಿಭಟನೆ, ಪ್ರದರ್ಶನಕ್ಕ ಒಳಗಾಗಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಪುತ್ತೂರು ವಾರದ ಸಂತೆಗೆ ಇದೀಗ ಒಂದು ಹಂತದಲ್ಲಿ ಕೊನೆಗೊಂಡಂತಾಗಿದೆ.
ನಗರ ಸಭೆಯ ತೀರ್ಮಾನದಂತೆ ಭಾನುವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ವಾರದ ಸಂತೆ ನಡೆಯಿತು. ಸುಮಾರು 250ಕ್ಕೂ ಅಧಿಕ ವ್ಯಾಪಾರಸ್ಥರು ಸಂತೆಗೆ ಆಗಮಿಸಿ ವ್ಯಾಪಾರ ನಡೆಸಿದರು. ಗ್ರಾಹಕರೂ ಯಾವುದೇ ಗೊಂದಲಗಳಿಲ್ಲದೆ ಖರೀದಿ ನಡೆಸಿದರು. ನಗರಸಭೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ರಜಾದಿನವಾಗಿದ್ದರೂ ಕಚೇರಿಯಲ್ಲಿಯೇ ಕುಳಿತು ಸಂತೆವಿಚಾರದಲ್ಲಿ ಜನರ ಹಾಗೂ ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. ಹಲವು ಬಾರಿ ಸಂತೆ ನಡೆಯುತ್ತಿರುವ ಕಿಲ್ಲೆ ಮೈದಾನಕ್ಕೆ ಆಗಮಿಸಿ ವ್ಯಾಪಾರಿಗಳೊಂದಿಗೆ ಸಮಾಲೋಚನೆ, ಚರ್ಚೆ ನಡೆಸಿದರು.
ರಸ್ತೆಯಲ್ಲಿ ಅವಕಾಶವಿಲ್ಲ:
ಕಿಲ್ಲೆ ಮೈದಾನದ ಒಳಭಾಗದಲ್ಲಿ ವ್ಯಾಪಾರ ನಡೆಸಲು ಸ್ಥಳಗುರುತು ‘ಮಾರ್ಕ್’ ಮಾಡಿ ಅವಕಾಶ ನೀಡಲಾಗಿತ್ತು. ಹಿಂದಿನಂತೆ ಕಿಲ್ಲೆ ಮೈದಾನದ ಸುತ್ತಲಿನ ಕೋರ್ಟು ರಸ್ತೆ, ಮಿನಿವಿಧಾನ ಸೌಧ ರಸ್ತೆ, ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿರಲಿಲ್ಲ. ಇದರಿಂದಾಗಿ ರಸ್ತೆ ಬದಿಯಲ್ಲಿ ಸಂತೆ ವ್ಯಾಪಾರ ನಡೆಸುತ್ತಿದ್ದ ಕೆಲ ವ್ಯಾಪಾರಿಗಳು ನಮಗೆ ಅಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ನಗರಸಭೆಯ ಅಧ್ಯಕ್ಷರನ್ನು ಒತ್ತಾಯಿಸಿದರು.
ಆದರೆ ಅಧ್ಯಕ್ಷರು ಯಾವುದೇ ಅವಕಾಶ ಒದಗಿಸಲಿಲ್ಲ. ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸೋಮವಾರ ನಡೆದುಕೊಂಡು ಬಂದಿದ್ದ ವಾರದ ಸಂತೆಯನ್ನು ಪುತ್ತೂರಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕಿ.ವಿ ಅವರ ಆದೇಶದಂತೆ ಕಳೆದ ನಾಲ್ಕು ತಿಂಗಳ ಹಿಂದೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು.
ಆದರೆ ಈ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಅಲ್ಲಿ ಸಂತೆ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸಬೇಕೆಂದು ಆಗ್ರಹ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಸೋಮವಾರದ ಬದಲು ಭಾನುವಾರ ಸಂತೆ ನಡೆಸುವ ನಿರ್ಧಾರವನ್ನು ನಗರಾಡಳಿತ ಕೈಗೊಂಡಿದೆ. ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರದ ಸಂತೆ ಮುಂದುವರಿಯಲಿದೆ. .
ನಗರಾಡಳಿತ ಕಿಲ್ಲೆ ಮೈದಾನದಲ್ಲಿ ಭಾನುವಾರ ಸಂತೆ ನಡೆಸಲು ನಿರ್ಧರಿಸಿದ ಬಳಿಕವೂ ನಗರಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು ಕಿಲ್ಲೆ ಮೈದಾನದಲ್ಲಿ ಸೋಮವಾರವೇ ಸಂತೆ ನಡೆಸಬೇಕೆಂಬ ಹಠಕ್ಕೆ ಬಿದ್ದಿದ್ದು, ತಾಲೂಕು ಪಂಚಾಯತ್ ಸಭೆಯಲ್ಲೂ ಸೋಮವಾರವೇ ವಾರದ ಸಂತೆ ನಡೆಯಬೇಕೆಂಬ ನಿರ್ಣಯಕೈಗೊಳ್ಳಲಾಗಿದೆ.
ಪುತ್ತೂರಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದವರು ಸೋಮವಾರ ಸಂತೆ ನಡೆಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇವೆಲ್ಲದ ನಡುವೆ ಅಧ್ಯಕ್ಷರು ಭಾನುವಾರ ಸಂತೆ ನಡೆಸುವ ತೀರ್ಮಾನವನ್ನು ಹಿಂದಕ್ಕೆ ಪಡೆದುಕೊಂಡಿರಲಿಲ್ಲ.
ಗ್ರಾಹಕರ ಹಿತದೃಷ್ಟಿ ಮುಖ್ಯ- ಅಧ್ಯಕ್ಷೆ ಜಯಂತಿ ಬಲ್ನಾಡು
ಸಂತೆ ನಡೆಯುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷೆ ಜಯಂತಿ ಬಲ್ನಾಡು, ಆಡಳಿತ ಮಂಡಳಿ ಸದಸ್ಯರಾದ ಮಹಮ್ಮದ್ ಆಲಿ, ಮುಖೇಶ್ ಕೆಮ್ಮಿಂಜೆ, ಅನ್ವರ್ ಖಾಸಿಂ, ಶಕ್ತಿ ಸಿನ್ಹಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಂತಿ ಬಲ್ನಾಡು ಮತ್ತು ಮಹಮ್ಮದ್ ಆಲಿ ಅವರು ಸಂತೆ ವಿಚಾರದಲ್ಲಿ ವ್ಯಾಪಾರಸ್ಥರಿಗಿಂತಲೂ ಗ್ರಾಹಕರ ಹಿತ ಮುಖ್ಯವಾಗಿದೆ. ಈ ಕಾರಣಕ್ಕೆ ಜನರ ಬೇಡಿಕೆಗೆ ಅನುಗುಣವಾಗಿ ಭಾನುವಾರ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಸೋಮವಾರಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ ಎಂದಿನಂತೆ ಸಂತೆ ನಡೆಯುತ್ತದೆ. ನ್ಯಾಯಾಲಯದ ಆದೇಶವಿರುವಾಗ ಕಿಲ್ಲೆ ಮೈದಾನದಲ್ಲಿ ಸೋಮವಾರವೇ ಸಂತೆ ನಡೆಸಬೇಕು ಎನ್ನುವುದು ಮೂರ್ಖತನದ ಪರಮಾವಧಿಯಾಗಿದೆ. ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ 2 ಸಂತೆಗಳು ನಡೆಯುತ್ತಿರುವುದು ಒಳ್ಳೆಯದು ಎಂದರು.
ಭಾನುವಾರದ ಸಂತೆ ಬಗ್ಗೆ ನಗರಸಭೆಯ ವತಿಯಿಂದ ಸಾಕಷ್ಟು ಪ್ರಚಾರಗಳನ್ನು ನಡೆಸಲಾಗಿದೆ, ಅಲ್ಲಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಕರಪತ್ರ ಹಂಚಲಾಗಿದೆ. ಧ್ವನಿವರ್ಧಕದ ಮೂಲಕವೂ ಪ್ರಚಾರ ಮಾಡಲಾಗಿದೆ. ಇದರಿಂದಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರು ಆಗಮಿಸಿದ್ದಾರೆ. ಮುಂದಿನ ಒಂದೆರಡು ವಾರಗಳಲ್ಲಿ ಭಾನುವಾರ ಸಂತೆ ಯಶಸ್ವಿಯಾಗಲಿದೆ ಎಂದರು.







