ಕ್ರಿಕೆಟ್-ಕಿರಿಯರ ಹಾಕಿ ತಂಡಗಳಿಗೆ ಪ್ರಧಾನಿ ಶ್ಲಾಘನೆ

ಹೊಸದಿಲ್ಲಿ, ಡಿ.25: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕ್ರಿಕೆಟ್ ತಂಡ ಹಾಗೂ ಕಿರಿಯರ ಹಾಕಿ ತಂಡಗಳನ್ನು ಇತ್ತೀಚಿನ ಯಶಸ್ಸಿಗಾಗಿ ಶ್ಲಾಘಿಸಿದ್ದಾರೆ. ಅವುಗಳ ಸಾಧನೆಯಿಂದ ದೇಶ ಹೆಮ್ಮೆ ಪಡುವಂತಾಗಿದೆಯೆಂದು ಅವರು ಹೇಳಿದ್ದಾರೆ.
ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್‌ಕೀ ಬಾತ್’ನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಕಳೆದೆರಡು ವಾರಗಳಲ್ಲಿ ಭಾರತ ಕ್ರೀಡೆಗಳಲ್ಲಿ ಸಾಧಿಸಿದ ಜಯವನ್ನು ಶ್ಲಾಘಿಸಿದ್ದಾರೆ. ಭಾರತದ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 4-0ದಿಂದ ಜಯಿಸಿದ್ದರೆ, ಜೂನಿಯ್ ಹಾಕಿ ತಂಡವು ವಿಶ್ವ ಚಾಂಪಿಯನ್ ಆಗಿದೆ.
ಭಾರತೀಯರಾಗಿ ಈ ಬಗ್ಗೆ ಹೆಮ್ಮೆಪಡುವುದು ಸಹಜವೆಂದು ಪ್ರಧಾನಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ‘2016ರ ವರ್ಷದ ಕ್ರಿಕೆಟಿಗ’ ಹಾಗೂ ‘ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ’ನೆಂದು ಐಸಿಸಿಯಿಂದ ಘೋಷಿಸಲ್ಪಟ್ಟಿದ್ದಾರೆ. ಯುವ ಆಟಗಾರ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದರೆ, ಕೆ.ಎಲ್. ರಾಹುಲ್ 199 ರನ್‌ಗಳ ಆಕರ್ಷಕ ಇನಿಂಗ್ಸ್ ಆಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ್ದಾರೆ ಹಾಗೂ ಸ್ಫೂರ್ತಿದಾಯಕ ನಾಯಕತ್ವ ನೀಡಿದ್ದಾರೆ. ಯುವ ಆಟಗಾರರಿಗೆ ವಿಶೇಷ ಅಭಿನಂದನೆ ಸಲ್ಲಿಸಲೇ ಬೇಕು. ಎಲ್ಲರಿಗೂ ತನ್ನ ಹೃದಯ ಪೂರಕ ಅಭಿನಂದನೆ ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದೇನೆಂದು ಮೋದಿ ತಿಳಿಸಿದ್ದಾರೆ.
ಕಿರಿಯರ ಹಾಕಿ ತಂಡವನ್ನು ಹೊಗಳಿದ ಅವರು, 15 ವರ್ಷಗಳ ಬಳಿಕ ಒಳ್ಳೆಯ ವಾರ್ತೆಯೊಂದು ಬಂದಿದೆ. ಕಿರಿಯರ ಹಾಕಿ ತಂಡ ವಿಶ್ವಕಪ್ ಎತ್ತಿಕೊಂಡಿದೆ. ಈ ಭರ್ಜರಿ ವಿಜಯಕ್ಕಾಗಿ ಯುವ ಆಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ.







