ಮುಂದಿನ ವರ್ಷದಿಂದ ದಿಲ್ಲಿಯ ಆರ್‌ಟಿಒಗಳು ನಗದುರಹಿತ

ಹೊಸದಿಲ್ಲಿ, ಡಿ.25: ದೇಶದ ರಾಜಧಾನಿಯ ಪ್ರಾದೇಶಿಕ ಸಾರಿಗೆ ಕಚೇರಿಗಳು ಜನವರಿಯಿಂದ ನಗದುರಹಿತವಾಗುವ ಸಿದ್ಧತೆಯಲ್ಲಿವೆ. ಆ ಬಳಿಕ ಚಾಲನಾ ಪರವಾನಿಗೆ, ಆಟೊ ಪರ್ಮಿಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್‌ಗಳಂತಹ ಎಲ್ಲ ಸೇವೆಗಳಿಗೆ ವಿದ್ಯುನ್ಮಾನ ಸಾಧನದ ಮೂಲಕ ಶುಲ್ಕ ಪಾವತಿಸಬಹುದಾಗಿದೆ.
ಸಾರಿಗೆ ಇಲಾಖೆಯು ತನ್ನ ವಲಯ ಕಚೇರಿಗಳಲ್ಲಿ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಅಳವಡಿಸಲಾರಂಭಿಸಿದೆ. ಕೆಲವು ಸ್ಥಳಗಳಲ್ಲಿ ನಗದುರಹಿತ ವ್ಯವಹಾರ ವ್ಯವಸ್ಥೆಯ ಪ್ರಯೋಗವನ್ನು ಅದು ನಡೆಸುತ್ತಿದೆ.
ಜನವರಿಯಿಂದ ಆರ್‌ಟಿಒಗೆ ಬರುವವರು, ಪರ್ಮಿಟ್, ಚಾಲನಾ ಪರವಾನಿಗೆ, ಫಿಟ್ನೆಸ್ ಸರ್ಟಿಫಿಕೇಟ್ ಇತ್ಯಾದಿ ವಿವಿಧ ಸೇವೆಗಳಿಗೆ ಡೆಬಿಟ್ ಅಥವಾ ಕ್ರೆಡಿಟ್‌ಕಾರ್ಡ್‌ಗಳ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ಅರ್ಜಿದಾರರು ನಗದಾಗಿ ಪಾವತಿಸುವ ಅಗತ್ಯ ಇರುವುದಿಲ್ಲವೆಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಸಾರಿಗೆ ಇಲಾಖೆಯ 14 ವಲಯ ಕಚೇರಿಗಳಿವೆ. ಈ ಕ್ರಮದಿಂದ ದಿಲ್ಲಿಯ ಜನರಿಗೆ ಅಡಚಣೆ ರಹಿತ ಸೇವೆ ಲಭಿಸಲಿದೆಯೆಂದು ಅವರು ಹೇಳಿದ್ದಾರೆ.





