ಡಿಜಿಟಲ್ ವ್ಯವಹಾರಕ್ಕೆ ಬಹುಮಾನ ಮನ್‌ಕೀಬಾತ್‌ನಲ್ಲಿ ಪ್ರಧಾನಿ ಘೋಷಣೆ

ಹೊಸದಿಲ್ಲಿ, ಡಿ.25: ಪ್ರಧಾನಿ ನರೇಂದ್ರ ಮೋದಿಯವರಿಂದು ಮೊಬೈಲ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಎರಡು ಕಾರ್ಯಕ್ರಮಗಳಿಗೆ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್‌ಕೀ ಬಾತ್’ನಲ್ಲಿ ಚಾಲನೆ ನೀಡಿದ್ದಾರೆ.
ನಗದುರಹಿತ ವ್ಯವಹಾರ ನಡೆಸುವ ವ್ಯಾಪಾರಿಗಳಿಗೆ ಆದಾಯ ತೆರಿಗೆಯಲ್ಲಿ ರಿಯಾಯ್ತಿ ನೀಡಲಾಗುವುದೆಂದು ಅವರು ಹೇಳಿದ್ದಾರೆ.
ಮೊಬೈಲ್ ಬ್ಯಾಂಕಿಂಗ್ ಉಪಯೋಗಿಸುವವರು ಹಾಗೂ ಡಿಜಿಟಲ್ ಪಾವತಿ ನಡೆಸುವವರಿಗಾಗಿ ‘ಕ್ರಿಸ್ಮಸ್ ಕೊಡುಗೆ’ಯೊಂದನ್ನೂ ಪ್ರಧಾನಿ ಘೋಷಿಸಿದ್ದಾರೆ. ಈ 100 ದಿನಗಳ ಯೋಜನೆಯಲ್ಲಿ 15 ಸಾವಿರ ಮಂದಿ ತಲಾ ರೂ.1 ಸಾವಿರ ಪಡೆಯಲಿದ್ದಾರೆ.
ಕೋಟಿಗಟ್ಟಲೆ ಬಹುಮಾನವಿರುವ ‘ಲಕ್ಕಿ ಗ್ರಾಹಕ್ ಯೋಜನೆ’ ಯ ಬಂಪರ್ ಡ್ರಾ ಬಾಬಾ ಸಾಹೇಬ್ ಅಂಬೇಡ್ಕರರ ಜನ್ಮದಿನವಾದ ಎ.14ರಂದು ನಡೆಯಲಿದೆ. ಈ ಯೋಜನೆ ಬಡವರು ಹಾಗೂ ಕಡಿಮೆ ಆದಾಯ ವರ್ಗದವರಿಗಾಗಿರುತ್ತದೆ. ಕೇವಲ ರೂ.50 ಹಾಗೂ ರೂ.3 ಸಾವಿರದ ನಡುವೆ ವ್ಯವಹಾರ ನಡೆಸುವವರು ಮಾತ್ರ ಬಹುಮಾನಕ್ಕೆ ಅರ್ಹರಾಗಿದ್ದಾರೆ. 30 ಕೋಟಿ ರುಪೇ ಕಾರ್ಡ್‌ಗಳಲ್ಲಿ 20 ಕೋಟಿ ಕಾರ್ಡ್‌ಗಳು ಬಡಕುಟುಂಬಗಳಿಗೆ ಸೇರಿವೆ. ಇವರು ಬಹುಮಾನ ಯೋಜನೆಗೆ ಸೇರಿಕೊಳ್ಳಬಹುದೆಂದು ಮೋದಿ ವಿವರಿಸಿದ್ದಾರೆ.
ನ.8ರಂದು ರೂ.500 ಹಾಗೂ 1000ದ ನೋಟುಗಳು ನಿಷೇಧಿಸಲ್ಪಟ್ಟ ಬಳಿಕ ನಗದು ರಹಿತ ವ್ಯವಹಾರವು ಶೇ.200ರಿಂದ 300ರ ವರೆಗೇರಿದೆಯೆಂದು ಅವರು ತಿಳಿಸಿದ್ದಾರೆ.
ಈ ದಿಸೆಯಲ್ಲಿ ಅಸ್ಸಾಂ ಸರಕಾರ ಹಾಗೂ ಜಿಎನ್‌ಎಫ್‌ಸಿಯಂತಹ ಸಂಘಟನೆಗಳ ಪ್ರಯತ್ನವನ್ನುಲ್ಲೇಖಿಸಿದ ಪ್ರಧಾನಿ, ವಿಶೇಷವಾಗಿ ಬಡವರಲ್ಲಿ ಡಿಜಿಟಲ್ ವ್ಯವಹಾರವನ್ನು ಜನಪ್ರಿಯಗೊಳಿಸಲು ಅವು ಹೊಸ ಕ್ರಮಗಳನ್ನು ಆರಂಭಿಸಿವೆ ಎಂದಿದ್ದಾರೆ.
ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸಲು ಸರಕಾರವು ಕಠಿಣ ಪ್ರಸ್ತಾವಗಳೊಂದಿಗೆ ಬೇನಾಮಿ ಆಸ್ತಿ ಕಾಯ್ದೆಯನ್ನು ಪುನಾರೂಪಿಸಿದೆಯೆಂದು ಅವರು ಹೇಳಿದ್ದಾರೆ.







