ಇಬ್ಬರು ಬಾಲಕರಿಂದ ಒತ್ತೆ ಹಣಕ್ಕಾಗಿ 3.5 ವರ್ಷದ ಬಾಲಕಿಯ ಅಪಹರಣ-ಕೊಲೆ

ಮುಂಬೈ, ಡಿ.25: ದಕ್ಷಿಣ ಮುಂಬೈಯ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ರೂ.1 ಕೋಟಿ ಒತ್ತೆ ಹಣಕ್ಕಾಗಿ ಮೂರುವರೆ ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ, ತುಂಡು ತುಂಡಾಗಿ ಕೊಚ್ಚಲಾಗಿದ್ದ ಬಾಲಕಿಯ ಮೃತದೇಹ ಕಾಝಿಪುರದಲ್ಲಿ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಬಾಲಾರೋಪಿಗಳನ್ನು ನಸುಕಿನ ವೇಳೆ ಬಂಧಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯು ಡಿ.5ರಿಂದ ಕಾಣೆಯಾಗಿದ್ದಳು. ಈ ಸಂಬಂಧ ಆಕೆಯ ಹೆತ್ತವರು ಜೆ.ಜೆ. ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅವರಿಗೆ, ರೂ.1 ಕೋಟಿ ಕೊಡುವಂತೆ ಅಜ್ಞಾತ ವ್ಯಕ್ತಿಗಳಿಂದ ದೂರವಾಣಿ ಕರೆ ಬಂದಿತ್ತು. ಅಷ್ಟೊಂದು ಹಣವನ್ನು ಕೊಡಲಾಗದ ಬಾಲಕಿಯ ತಂದೆ, ಅಪಹರಣಕಾರರಿಗೆ ರೂ.28 ಲಕ್ಷ ಪಾವತಿಸಲು ಒಪ್ಪಿದ್ದರೆಂದು ಡಿಸಿಪಿ ಮನೋಜ್‌ಕುಮಾರ್ ಶರ್ಮಾ ವಿವರಿಸಿದ್ದಾರೆ. ನೆರೆಯ ಥಾಣೆ ಜಿಲ್ಲೆಯ ಕಲ್ಯಾಕ್ಕೆ ಒತ್ತೆ ಹಣದೊಂದಿಗೆ ಬರುವಂತೆ ತಂದೆಗೆ ಅಪಹರಣಕಾರರು ಬಳಿಕ ಸೂಚಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಬಾಲಕಿಯ ನೆರೆಯವನಾದ 16ರ ಹರೆಯದ ಹುಡುಗನೊಬ್ಬ ಹೆತ್ತವರಿಗೆ ಅಪಹರಣದ ಸುದ್ದಿ ತಿಳಿಸಿದ್ದುದನ್ನು ಪತ್ತೆ ಮಾಡಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆತನೇ, 16ರ ಹರೆಯದ ಇನ್ನೊಬ್ಬ ಸಂಗಾತಿಯೊಂದಿಗೆ ಡಿ.5ರಂದು ಬಾಲಕಿಯನ್ನು ಅಪಹರಿಸಿ, ಅದೇ ದಿನ ಸೆಲ್ ಫೋನ್ ಚಾರ್ಜರ್‌ನ ವೈರ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆಂಬುದು ಬೆಳಕಿಗೆ ಬಂತೆಂದು ಶರ್ಮಾ ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ.







