ಪರಮಾಣು ಹೊಣೆಗಾರಿಕೆ ಕಾಯ್ದೆ ಕುರಿತು ಹೆಚ್ಚಿನ ಸ್ಪಷ್ಟನೆ ಕೋರಿದ ಜಿಇ

ಹೊಸದಿಲ್ಲಿ,ಡಿ.25: ಭಾರತದ ನಾಗರಿಕ ಪರಮಾಣು ಹೊಣೆಗಾರಿಕೆ ಕಾಯ್ದೆಯಿಂದಾಗಿ ದೇಶದ ಪರಮಾಣು ಕ್ಷೇತ್ರಕ್ಕೆ ಕಿರಿಕಿರಿ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅಮೆರಿಕದ ಪ್ರಮುಖ ಎರಡು ರಿಯಾಕ್ಟರ್ ನಿರ್ಮಾಣ ಕಂಪನಿಗಳಲ್ಲೊಂದಾಗಿರುವ ಜಿಇ ಹಿತಾಚಿ ನ್ಯೂಕ್ಲಿಯರ್ ಎನರ್ಜಿಯು ‘ಸುಸ್ಥಿರ ನಿಯಂತ್ರಣ ವ್ಯವಸ್ಥೆ ’ಅನುಪಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತದೊಂದಿಗೆ ಪಾಲುದಾರಿಕೆಯಲ್ಲಿ ಸೇರುವ ಮುನ್ನ ಹೆಚ್ಚಿನ ಸ್ಪಷ್ಟನೆಯನ್ನು ಕೇಳಿದೆ. ಜಿಇ ಉದಾಸೀನತೆಯನ್ನು ಪ್ರದರ್ಶಿಸುತ್ತಿದೆ ಎಂದು ಒಪ್ಪಿಕೊಂಡಿರುವ ಭಾರತೀಯ ಅಧಿಕಾರಿಗಳು ಅದರ ಕಳವಳವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯೋಜನೆಯಲ್ಲಿ ಮುಂದುವರಿಯಲು ಪೂರ್ವ ಅಗತ್ಯವಾಗಿರುವ ಉಲ್ಲೇಖ ಸ್ಥಾವರವನ್ನು ಅದು ಹೊಂದಿಲ್ಲ ಎಂದು ಹೇಳಿದ್ದಾರೆ. ಜಿಇ ಭಾರತದಲ್ಲಿ ಆರು ರಿಯಾಕ್ಟರ್‌ಗಳನ್ನು ನಿರ್ಮಿಸಲಿದೆ ಎನ್ನಲಾಗಿದೆ.
ಜಗತ್ತಿನೆಲ್ಲೆಡೆ ವಾಡಿಕೆಯಲ್ಲಿರುವಂತೆ ಹೊಣೆಗಾರಿಕೆಯನ್ನು ಸ್ಥಾವರ ನಿರ್ವಾಹಕರ ಮೇಲೆ ಹೊರಿಸುವ ಪರಮಾಣು ಬಾಧ್ಯತೆ ಕಾನೂನನ್ನು ಒಳಗೊಂಡ ಸುಸ್ಥಿರ ನಿಯಂತ್ರಕ ವ್ಯವಸ್ಥೆಯು ಮುಂದಿನ ಹೆಜ್ಜೆಯಿರಿಸಲು ಅಗತ್ಯವಾಗಿದೆ ಎಂದು ಜಿಇ ಭಾವಿಸಿದೆ ಎಂದು ಜಿಇ ಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ಸಿಇಒ ವನಮಾಲಿ ಅಗರವಾಲ ಅವರು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು.
ಭಾರತದಲ್ಲಿ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಜಿಇ ಪ್ರಬಲ ಆಸಕ್ತಿಯನ್ನು ಹೊಂದಿದೆ. ಅದರೆ ವಿದೇಶಿ ಪಾಲುದಾರರ ಕಳವಳಗಳನ್ನು ನಿವಾರಿಸಲು ಭಾರತವು ನ್ಯೂಕ್ಲಿಯರ್ ಇನ್ಶೂರನ್ಸ್ ಪೂಲ್ ಸ್ಥಾಪನೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಯಾದರೂ ಪರಮಾಣು ಹೊಣೆಗಾರಿಕೆ ಕಾಯ್ದೆಯು ಇನ್ನಷ್ಟು ಸ್ಪಷ್ಟವಾಗಬೇಕು ಎಂದು ಅವರು ಹೇಳಿದರು.







