ಅಲ್ಲಿಪಾದೆ : ಕ್ರಿಸ್ತ ಜನನದ ಸಂದೇಶ ಸಾರುವ ಕ್ರಿಸ್ಮಸ್ ಟ್ಯಾಬ್ಲೊ ಕಾರ್ಯಕ್ರಮ

ಬಂಟ್ವಾಳ, ಡಿ. 25: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿ ವತಿಯಿಂದ ಆದಿತ್ಯವಾರ ಕ್ರಿಸ್ತ ಜನನದ ಸಂದೇಶ ಸಾರುವ ಕ್ರಿಸ್ಮಸ್ ಟ್ಯಾಬ್ಲೊ ಕಾರ್ಯಕ್ರಮ ಸಂಭ್ರಮದಿಂದ ಜರಗಿತು.
ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿಯ ಧರ್ಮ ಗುರು ವಂದನೀಯ ಫಾದರ್ ಗ್ರೆಗರಿ ಪಿರೇರ ನಾವೂರು ಜಂಕ್ಷನ್‌ನಲ್ಲಿ ಕ್ರಿಸ್ಮಸ್ ಟ್ಯಾಬ್ಲೊಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬವು ನಾಡಿನಾದ್ಯಂತ ಪ್ರೀತಿ, ನೆಮ್ಮದಿ, ಶಾಂತಿ, ಸೌಹಾರ್ದತೆಯ ಸಂಕೇತವಾಗಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಪ್ರತೀಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಏಸು ಕ್ರಿಸ್ತರ ಸಂದೇಶವನ್ನು ಸರ್ವ ಧರ್ಮಿಯರಿಗೆ ತಿಳಿಸಿಕೊಡಳು ಕ್ರಿಸ್ಮಸ್ ಟ್ಯಾಬ್ಲೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಾವೂರಿನಿಂದ ಹೊರಟ ಕ್ರಿಸ್ಮಸ್ ಟ್ಯಾಬ್ಲೊ ಅಲ್ಲಿಪಾದೆ, ಮಾವಿನಕಟ್ಟೆ ಜಂಕ್ಷನ್ ಮೂಲಕ ಸಾಗಿ ಸರಪಾಡಿಯಲ್ಲಿ ಸಮಾಪ್ತಿಗೊಂಡಿತ್ತು. ಟ್ಯಾಬ್ಲೊದಲ್ಲಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಗಳು ಏಸು ಕ್ರಿಸ್ತರ ಸಂದೇಶವನ್ನು ಸಾರುವ ನೃತ್ಯ ಹಾಗೂ ನಾಟಕವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನೂರಾರು ಕ್ರೈಸ್ತ ಭಾಂದವರು ಟ್ಯಾಬ್ಲೊದೊಂದಿಗೆ ವಾಹನಗಳಲ್ಲಿ ಮೆರವಣಿಗೆ ನಡೆಸಿರು.
ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿ ಉಪಾಧ್ಯಕ್ಷ ಲಿಯೊ ಫೆರ್ನಾಂಡೀಸ್, ಕಾರ್ಯದರ್ಶಿ ಲಾರೆನ್ಸ್ ಡಿಸೋಜ, ಜೆರಾಲ್ಡ್ ಪಿಂಟೊ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮಿತುನ್ ಸ್ವಕ್ವೇರ ಸ್ವಾಗತಿಸಿದರು. ರೋಶನ್ ನೋರಾಂಟೊ ಕಾರ್ಯಕ್ರಮ ನಿರೂಪಿಸಿದರು.







