ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್‌ರವರಿಗೆ ಸುಳ್ಯದಲ್ಲಿ ಗೌರವಾರ್ಪಣೆ

ಸುಳ್ಯ, ಡಿ.25 : ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಎಂ.ವಿಶ್ವನಾಥ ನಾಯರ್‌ರವರಿಗೆ ಗೌರವಾರ್ಪಣಾ ಸಮಾರಂಭ ಸುಳ್ಯದ ಶ್ರೀ ಮಂಜುನಾಥೇಶ್ವರ ಕೃಪಾ ರೋಟರಿ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.
ಸುಳ್ಯ ತಾಲೂಕು ಸಹಕಾರಿ ಯೂನಿಯನ್, ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ , ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸುಳ್ಯ ತಾಲೂಕಿನ ನೌಕರರ ವೃಂದ ಮತ್ತು ಅಭಿಮಾನಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷರಾದ ಜಾಕೆ ಮಾಧವ ಗೌಡ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ವಹಿಸಿದ್ದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೀತಾರಾಮ ರೈ ವಿಶ್ವನಾಥ ನಾಯರ್ - ನಳಿನಿ ದಂಪತಿಯನ್ನು ಸನ್ಮಾನಿಸಿದರು.
ಸುಳ್ಯವು ಇಂದು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದರೆ ಅದಕ್ಕೆ ಡಿಸಿಸಿ ಬ್ಯಾಂಕ್ ಮುಖ್ಯ ಕಾರಣವೇ ಹೊರತು ವಾಣಿಜ್ಯ ಬ್ಯಾಂಕ್‌ಗಳಲ್ಲ. ಇಂತಹ ಸಂಸ್ಥೆಯಲ್ಲಿ ಉನ್ನತ ಅಧಿಕಾರಿಯಾಗುವ ಮೂಲಕ ವಿಶ್ವನಾಥ ನಾಯರ್ ಸುಳ್ಯಕ್ಕೆ ಕೀರ್ತಿ ತಂದಿದ್ದಾರೆ. ಸೇವೆಯಲ್ಲಿ ಎಲ್ಲರಿಂದ ಶಹಬ್ಬಾಸ್‌ಗಿರಿ ಪಡೆದ ಅವರು ಜನರ ನೆನಪಿನಲ್ಲಿ ಉಳಿಯುವ ಸಾಧನೆ ಮಾಡಿದ್ದಾರೆ ಎಂದರು.
ಮಾಜಿ ಲಯನ್ಸ್ ರಾಜ್ಯಪಾಲ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡಿದರು. ಆತ್ಮಬಲ, ನೈತಿಕತೆ ಮತ್ತು ಆದರ್ಶ ವ್ಯಕ್ತಿತ್ವದಿಂದ ತನ್ನ ಅಧಿಕಾರಕ್ಕೆ ನ್ಯಾಯ ತಂದುಕೊಟ್ಟ ವಿಶ್ವನಾಥ ನಾಯರ್, ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯ ಬದಲಾವಣೆಯ ದಿನಗಳಲ್ಲೂ ಜನರಿಗೆ ಆ ಕುರಿತ ಮಾಹಿತಿ ಸೇವೆ ನೀಡುವಂತಾಗಲಿ ಎಂದವರು ಹಾರೈಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ದೇವರಾಜ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಪಿ.ಬಿ. ದಿವಾಕರ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ರೈ ಉಬರಡ್ಕ ಸ್ವಾಗತಿಸಿದರು.ಬಿ.ಎಸ್.ಶರೀಫ್ ಸನ್ಮಾನ ಪತ್ರ ವಾಚಿಸಿದರು.
ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿ ನೌಕರರ ಯೂನಿಯನ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮ ಸಂಯೋಜಕರಾದ ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶ್ರೀಮತಿ ನಳಿನಿ ವಿಶ್ವನಾಥ ನಾಯರ್ ಉಪಸ್ಥಿತರಿದ್ದರು.
ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು, ಸಹಕಾರಿಗಳು ಹಾಗೂ ಅಭಿಮಾನಿಗಳು ವಿಶ್ವನಾಥ ನಾಯರ್ ಅವರನ್ನು ಹಾರಾರ್ಪಿಸಿ ಗೌರವಿಸಿದರು.







