ದಿಡ್ಡಳ್ಳಿ ಮಾದರಿಯಲ್ಲಿ ಕೊಲ್ಲಹಳ್ಳಿ ಭೂ ಚಳವಳಿ: ನೂರ್ ಶ್ರೀಧರ್
ಹಕ್ಕು ಪತ್ರನೀಡುವಂತೆ ಜಿಲ್ಲಾಡಳಿತಕ್ಕೆ ಆಗ್ರಹ: 28ಕ್ಕೆ ಸರ್ವ ಸಂಘಟನೆಗಳ ಸಭೆ

ಸಕಲೇಶಪುರ , ಡಿ.25 : ತಾಲೂಕಿನ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಹಳ್ಳಿ ಗ್ರಾಮದಲ್ಲಿ ದಲಿತ, ಕೂಲಿ ಕಾರ್ಮಿಕ, ನಿರ್ಗತಿಕರು ನಿವೇಶನಕ್ಕಾಗಿ ನಡೆಸುತ್ತಿರುವ ಹೋರಾಟ ಸಂವಿಧಾನ ಬದ್ದವಾಗಿದೆ. ಈ ಹೋರಾಟವನ್ನು ತಾವು ಬೆಂಬಲಿಸುವುದಾಗಿ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಸದಸ್ಯ ನೂರ್ ಶ್ರೀಧರ್ ಹೇಳಿದರು.
ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಗ್ರಾಮಠಾಣ ಭೂಮಿಯಲ್ಲಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸುತ್ತಿರುವ ವಸತಿ ರಹಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಗ್ರಾಮದ ವಸತಿ ರಹಿತರು ಸೂರಿಗೆ ಹಲವು ಬಾರಿ ಮನವಿ ಮಾಡಿದರೂ ಈ ಬಗ್ಗೆ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸದಿದ್ದಾಗ ಅನಿವಾರ್ಯವಾಗಿ ನಿರ್ಗತಿಕರು ಗುಡಿಸಲು ನಿರ್ಮಿಸಿದ್ದಾರೆ ಎಂದರು.
ಸೂರು ನಿರ್ಮಿಸುವುದು ಸರಕಾರದ ಕರ್ತವ್ಯವಾಗಿದೆ. ಆಳುವವರು ಇದನ್ನು ಮರೆತಾಗ ಜನ ತಲೆಯ ಮೇಲಿನ ಸೂರಿಗಾಗಿ ಗುಡಿಸಲು ಕಟ್ಟಿಕೊಂಡಿದ್ದರೆ, ಅದನ್ನು ಅಕ್ರಮ ಎಂದು ತೆರವು ಮಾಡಲು ಹೊರಟಿರುವುದು ಖಂಡನೀಯ ಎಂದರು.
ಭೂಮಾಲಿಕರಿಂದ ಒತ್ತುವರಿಯಾಗಿದ್ದ ಗ್ರಾಮಠಾಣ ಭೂಮಿಯನ್ನು ಇಲ್ಲಿಯ ಜನ ನ್ಯಾಯಲಯದಲ್ಲಿ ಪ್ರಶ್ನಿಸಿ ಖುಲ್ಲಾ ಮಾಡಿಸಿಕೊಂಡಿದ್ದಾರೆ. ಈ ಭೂಮಿಯ ಹಕ್ಕು ಈ ಜನರದ್ದಾಗಿದೆ ಎಂದರು.
ಮಳಲಿ ಗ್ರಾಮ ಪಂಚಾಯತ್ ಪಿಡಿಒ ಗ್ರಾಮಸ್ಥರ ಪರವಾಗಿ ಕೆಲಸ ನಿರ್ವಹಿಸುವುದನ್ನು ಬಿಟ್ಟು ಪ್ರಭಾವಿಗಳ ಪರವಾಗಿ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ . ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಕೂಡಲೆ ಈ ಬಗ್ಗೆ ಗಮನ ಹರಿಸದಿದ್ದರೆ ದಿಡ್ಡಳ್ಳಿ ಮಾದರಿ ಬೃಹತ್ ಹೋರಾಟ ಹಮ್ಮಿ ಕೊಳ್ಳಲಾಗುವುದು . ಇನ್ನೆರಡು ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದರು.
ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಸದಸ್ಯ ನಿರ್ವಾಣ್ಯ ಮಾತನಾಡಿ, ಸ್ಥಳಿಯ ಅಧಿಕಾಗಳು ಬಡವರ ಕಣ್ಣೀರು ಒರೆಸುವುದು ಬಿಟ್ಟು ಕಣ್ಣೀರು ಹರಿಸುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲು ಸಮಿತಿ ಸಿದ್ಧವಾಗಿದೆ ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದರು. ಬಂಡವಾಳಶಾಹಿಗಳ ಹಿತಕ್ಕಾಗಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ದುಡಿಯುವ ವರ್ಗಕ್ಕೆ ಸವಲತ್ತು ಸಿಗುತ್ತಿಲ್ಲ. ವಸತಿ ರಹಿತರ ಮನೆ ತೆರವುಗೊಳಿಸಲು ಹೊರಟಿರುವುದು ಯಾಕೆ ಎಂದು ಪ್ರಶ್ನಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಭೂಮಿ ಕೊಡಿಸುವ ಭರವಸೆಯನ್ನು ನೀಡುತ್ತಿರುವ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಒಂದು ವಾರದೊಳೊಳಗಾಗಿ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಹೇಮಂತ್, ಸದಸ್ಯರಾದ ವಸಂತ್, ಗ್ರಾಮದ ಮುಖಂಡರಾದ ಈಶ್ವರ್ ಆಳ್ವ ಮತ್ತು ಸತೀಶ್ ಶೆಟ್ಟಿ ಇನ್ನಿತರರು ಇದ್ದರು.
ವಿವಿಧ ಸಂಘಟನೆಗಳ ಮುಖಂಡರ ಭೇಟಿ:
ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ತಂಡದ ಸದಸ್ಯರೊಂದಿಗೆ ಸ್ಥಳಿಯ ವಿವಿಧ ಸಂಘಟನೆಗಳ ಮುಖಂಡರು ಭೇಟಿ ಮಾಡಿದರು . ಅಂಬೇಡ್ಕರ್ ಯುವಸೇನೆ ರಾಜ್ಯ ಉಪಾಧ್ಯಕ್ಷ ಮಲ್ನಾಡ್ ಮೆಹಬೂಬ್, ದಲಿತ ಸಂಘಟನೆಯ ಒಕ್ಕೂಟದ ಸಂಚಾಲಕ ಜೈ ಭೀಮ್ ಮಂಜು, ದ ಸಂ ಸ ಮುಖಂಡ ವಲಳಹಳ್ಳಿ ವೀರೇಶ್, ತುಂಗೇಶ್, ಬಿಎಸ್ ಪಿ ಜಿಲ್ಲಾ ಕಾರ್ಯದರ್ಶಿ ಸ್ಟೇವನ್ ಪ್ರಕಾಶ್, ಆದಿವಾಸಿ ಬುಡಕಟ್ಟು ಸಮನ್ವಯ ಸಮಿತಿ ಅಧ್ಯಕ್ಷ ನವೀನ್ ಸದ ಎನ್ ಎಸ್ ಮುಂತಾದವರು ಮುಂದಿನ ಹೆಚ್ಚೆಗಳ ಬಗ್ಗೆ ಚರ್ಚಿಸಿದರು.







