ಹೊಸ ವರ್ಷಾಚರಣೆ

ಹೊಸ ವರ್ಷದ ಆರಂಭದ ದಿನವನ್ನು ಸ್ವಾಗತಿಸುವ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುಮಾರು 4 ಸಾವಿರ ವರ್ಷಗಳ ಹಿಂದೆ, ಬ್ಯಾಬಿಲೋನಿಯನ್ನರ ಕಾಲದಲ್ಲೂ ಹೊಸ ವರ್ಷಾಚರಣೆ ನಡೆಯುತ್ತಿತ್ತು ಎಂದು ದಾಖಲೆಗಳು ತಿಳಿಸುತ್ತವೆ. ಕೆಲವು ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಧಾರ್ಮಿಕ, ಸಾಂಪ್ರದಾಯಿಕ ಹಿನ್ನೆಲೆಯಿದ್ದರೆ, ಕೆಲವೆಡೆ ಕೇವಲ ಮೋಜು, ಮಸ್ತಿ, ಕುಡಿತ, ಕುಣಿತ... ಇಷ್ಟಕ್ಕೇ ಹೊಸ ವರ್ಷಾಚರಣೆ ಸೀಮಿತವಾಗಿರುತ್ತದೆ.
ಡಿ.31ರಂದು ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಕಾಣಬಹುದು. ಹೊಸ ವರ್ಷಾ ಚರಣೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಕಾಲದಲ್ಲೂ ಜನರು ಹೊಸ ವರ್ಷ ವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಈ ಆಚರಣೆಗೆ ಅವರದ್ದೇ ಆದ ನಂಬಿಕೆ, ಸಂಪ್ರದಾಯದ ಹಿನ್ನೆಲೆ ಇರುತ್ತಿತ್ತು.
ಭಾರತದಲ್ಲಿ ಹೊಸ ವರ್ಷಾಚರಣೆ
ವಿವಿಧ ಧರ್ಮದ, ವಿವಿಧ ಪಂಗಡದವರು ವಾಸಿಸುತ್ತಿರುವ ಭಾರತದಲ್ಲಿ ಹೊಸ ವರ್ಷಾಚರಣೆ ಕೂಡಾ ವೈವಿಧ್ಯಮಯ ವಾಗಿಯೇ ನಡೆಯುತ್ತದೆ. ಕೆಲವು ರಾಜ್ಯಗಳು ಯುಗಾದಿಯಂದು ಹೊಸ ವರ್ಷದ ಆರಂಭ ಎಂದು ಸಾಂಪ್ರದಾಯಕವಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ಹೋಳಿ ಹಬ್ಬವು ಹೊಸ ವರ್ಷದ ಆಚರಣೆಯ ಪ್ರತೀಕವಾಗಿದೆ.ಕೇರಳದಲ್ಲಿ ವಿಷು ಹಬ್ಬ, ಅಸ್ಸಾಂನಲ್ಲಿ ರೋಂಗಲಿ ಬಿಹು, ಬಂಗಾಳದಲ್ಲಿ ‘ಪೊಯ್ಲ ಬೈಷಾಕ್’, ಪಂಜಾಬ್‌ನಲ್ಲಿ ವೈಶಾಕಿ.. ಹೀಗೆ ಸಾಂಪ್ರದಾಯಿಕ ಶೈಲಿಯಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ.
ಆದರೆ ರೋಮನ್ ಕ್ಯಾಲೆಂಡರ್ ಪ್ರಕಾರ ಪ್ರತೀ ವರ್ಷದ ಜನವರಿ 1ರಂದು ಹೊಸ ವರ್ಷದ ಆರಂಭ. ಜಾಗತೀಕರಣಕ್ಕೆ ತೆರೆದುಕೊಳ್ಳುವ ಮೊದಲೂ ಭಾರತದಲ್ಲಿ ಜನವರಿ 1 ಹೊಸ ವರ್ಷದ ಆರಂಭದ ದಿನ ಎಂದೇ ಪರಿಗಣಿತವಾಗಿತ್ತು. ಸಂಪ್ರದಾಯ, ನಂಬಿಕೆಗಳು ಏನೇ ಇರಲಿ, ದೇಶದೆಲ್ಲೆಡೆ ಬಹುತೇಕ ಡಿ.31ರ ರಾತ್ರಿಯಿಡೀ ಹೊಸ ವರ್ಷದ ಸಂಭ್ರಮಾ ಚರಣೆ ನಡೆಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಇರಬಹುದು.. ನಮ್ಮಲ್ಲಿ ಈ ಸಂಭ್ರಮಾಚರಣೆ ಮೋಜು, ಮಸ್ತಿಗೇ ಸೀಮಿತವಾಗಿರುತ್ತದೆ. ಕೆಲವೆಡೆ ಮುದುಕನ ಪ್ರತಿಕೃತಿ ತಯಾರಿಸಿ ಅದನ್ನು ಡಿ.31ರ ಮಧ್ಯರಾತ್ರಿ ಸುಡುವುದೂ ಇದೆ. ಹಳೆಯದನ್ನು ಸುಟ್ಟುಹಾಕಿ, ಹೊಸದನ್ನು ಸ್ವಾಗತಿಸುವ ಕ್ರಮ ಇದು ಎಂದು ಇವರು ಸಮರ್ಥಿಸಿಕೊಳ್ಳುತ್ತಾರೆ.
ಇಂದಿನ ಯುವಜನರಲ್ಲಿ ಹಿರಿಯರ ಕುರಿತು ಹೆಚ್ಚುತ್ತಿರುವ ಅಸಹನೆ, ಅಸಡ್ಡೆ ಮತ್ತು ನಿರ್ಲಕ್ಷದ ಪ್ರತೀಕ ಇದು ಎಂದೂ ಕೆಲವರು ಹೇಳುವುದುಂಟು. ಕೆಲವರಿಗೆ ಹೊಸ ವರ್ಷ ಎಂದರೆ ಅದೊಂದು ಮಾಮೂಲು ದಿನವಾಗಿರುತ್ತದೆ ಅಷ್ಟೇ. ಮನೆಯ ಗೋಡೆಯ ಮೇಲಿದ್ದ ಹಳೆಯ ಕ್ಯಾಲೆಂಡರ್ ಮೂಲೆಗೆಸೆದು ಹೊಸ ಕ್ಯಾಲೆಂಡರ್ ನೇತು ಹಾಕುವುದಷ್ಟೇ ಅಂದಿನ ದಿನದ ವಿಶೇಷತೆ ಎನ್ನುತ್ತಾರೆ ಇವರು. ಇನ್ನು ಕೆಲವರು ಇರುತ್ತಾರೆ. ಪ್ರತೀ ಬಾರಿ ಹೊಸ ವರ್ಷದ ದಿನಾಚರಣೆಯಂದು, ಈ ವರ್ಷ ಸಾಧಿಸಬೇಕಾದ ಕಾರ್ಯಗಳ ಪಟ್ಟಿಯನ್ನು ರೆಡಿ ಮಾಡಿ ಇಡುತ್ತಾರೆ. ಆದರೆ ಹೀಗೊಂದು ಪಟ್ಟಿ ಮಾಡಿರುವ ವಿಷಯ ಮತ್ತೆ ಅವರಿಗೆ ನೆನಪಾಗುವುದು ಮುಂದಿನ ಬಾರಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ..!
ಆದರೆ ಈಗಿನ ‘ಜಮಾನಾ’ದ ಯುವ ಜನತೆಗೆ ಹೊಸ ವರ್ಷದ ಆಚರಣೆ ಎಂದರೆ ಅದೊಂದು ಮೋಜಿನಾಟ ಎಂಬಂತಾಗಿದೆ. ಮನೆಯಲ್ಲಿ ಹಿರಿಯರು ಮೂಲೆಗುಂಪಾಗು ತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಂಪ್ರದಾಯ, ನಂಬಿಕೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಸ್ಮಾರ್ಟ್ ಫೋನ್, ವಾಟ್ಸ್ ಆ್ಯಪ್‌ಗಳ ಕಾರುಬಾರಿನಲ್ಲಿ ಎಲ್ಲೋ ದೂರದ ಬೀಚ್‌ನಲ್ಲೋ, ಪಬ್‌ನಲ್ಲೋ ಕುಳಿತುಕೊಂಡು ಊರಿನಲ್ಲಿರುವ ಹೆತ್ತವರಿಗೆ- ಹ್ಯಾಪಿ ನ್ಯೂ ಇಯರ್ ಮಮ್ಮಿ.. ಪಪ್ಪಾ.. ಎಂದು ಮೆಸೇಜು ಕಳಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಮನೋಭಾವನೆ ಹೆಚ್ಚುತ್ತಿದೆ. ಹೊಸ ನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಗುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮ ‘ಒಂದು ದಿನಕ್ಕೇ’ ಸೀಮಿತವಾಗಿಬಿಟ್ಟಿದೆ.
ಚೀನಾದಲ್ಲಿ ಹೊಸ ವರ್ಷಾಚರಣೆ
ಚೀನಾದಲ್ಲಿ ಇಂದಿಗೂ ಆಚರಣೆಯಲ್ಲಿರುವ ಅತ್ಯಂತ ಪುರಾತನ ಸಂಪ್ರದಾಯ ಎಂದರೆ ಹೊಸ ವರ್ಷದ ಸಂಭ್ರಮಾಚರಣೆ. ಶಾಂಗ್ ರಾಜವಂಶದ ಆಡಳಿತ ಕಾಲದಲ್ಲಿ, ಅಂದರೆ ಸುಮಾರು 3 ಸಾವಿರ ವರ್ಷಕ್ಕೂ ಹಿಂದಿನ ಕಾಲದಿಂದಲೂ ಚೀನಾದಲ್ಲಿ ಹೊಸ ವರ್ಷಾಚರಣೆ ನಡೆಯುತ್ತಿತ್ತು. ಇಲ್ಲಿ ಹೊಸ ವರ್ಷಾಚರಣೆಯ ಹಿಂದೆ ಒಂದು ಜಾನಪದ ಕಥೆಯಿದೆ. ಚೀನಾದಲ್ಲಿ ಪ್ರಚಲಿತವಿರುವ ಕಥೆಯ ಪ್ರಕಾರ ಅಲ್ಲಿ ಈ ಹಿಂದೆ ನಿಯಾನ್ ಎಂಬ ರಕ್ತಪೀಪಾಸು ಪ್ರಾಣಿಯೊಂದಿತ್ತು (ಚೀನಾದಲ್ಲಿ ನಿಯಾನ್ ಎಂಬ ಪದಕ್ಕೆ ಹೊಸ ವರ್ಷ ಎಂಬ ಅರ್ಥವೂ ಇದೆ). ಹೊಸ ವರ್ಷದ ದಿನದಂದು ಅದು ನಾಗರಿಕರ ಮೇಲೆ ಆಕ್ರಮಣ ನಡೆಸುತ್ತಿತ್ತು. ಹೊಸ ವರ್ಷದ ದಿನದಂದು ಆಕ್ರಮಣ ಮಾಡುವ ಈ ಪ್ರಾಣಿಯನ್ನು ಹೆದರಿಸಲು ಚೀನೀಯರು ತಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸುತ್ತಿದ್ದರು. ಬಿದಿರುಗಳನ್ನು ಬೆಂಕಿಯಲ್ಲಿ ಸುಡುತ್ತಿದ್ದರು ಮತ್ತು ಗಟ್ಟಿಯಾಗಿ ಸದ್ದು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ತಂತ್ರ ಫಲಿಸಿತು.ಕಣ್ಣು ಕೋರೈಸುವ ಬೆಳಕಿನ ಮಾಲೆಯನ್ನು ಕಂಡು ಬೆದರಿದ ನಿಯಾನ್ ಅಲ್ಲಿಂದ ಪರಾರಿಯಾಯಿತು ಮತ್ತು ಮುಂದೆಂದೂ ಆ ಕಡೆ ತಿರುಗಿ ಕೂಡಾ ನೋಡಲಿಲ್ಲ ಎಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಮನುಷ್ಯರಿಗೆ ತೊಂದರೆ ನೀಡುತ್ತಿದ್ದ ಪ್ರಾಣಿಯನ್ನು ದೂರಕ್ಕೆ ಅಟ್ಟಲು ಚೀನೀಯರು ಕೈಗೊಂಡ ಬೆಳಕು, ಬೆಂಕಿಯನ್ನು ಉರಿಸುವುದು, ರಾತ್ರಿಯಿಡೀ ಶಬ್ದ ಮಾಡುತ್ತಾ ಜಾಗರಣೆ ಕುಳಿತಿರುವುದು.. ಇವೆಲ್ಲಾ ಇಂದು ಕೂಡಾ ಅಲ್ಲಿ ಹೊಸ ವರ್ಷಾಚರಣೆಯ ರೂಪದಲ್ಲಿ ಮುಂದುವರಿಯುತ್ತಿವೆ. ಚೀನೀಯರ ಹೊಸ ವರ್ಷಾಚರಣೆ 15 ದಿನಗಳ ಸಂಭ್ರಮವಾಗಿದೆ. ಮನೆ ಮತ್ತು ಕುಟುಂಬವನ್ನು ಕೇಂದ್ರೀಕರಿಸಿ ಈ ಸಂಭ್ರಮಾಚರಣೆ ನಡೆಯುತ್ತದೆ. ಜನರು ತಮ್ಮ ಮನೆಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಅನಿಷ್ಟಗಳನ್ನು ಗುಡಿಸಿ ಮನೆಯಿಂದ ಹೊರ ಹಾಕುವುದು ಎಂಬ ನಂಬಿಕೆ ಈ ಪ್ರಕ್ರಿಯೆ ಯ ಹಿಂದೆ ಇದೆ. ತಾವು ಯಾರಿಗೆಲ್ಲಾ ಸಾಲ ಕೊಡಲು ಬಾಕಿ ಇದೆಯೋ ಅದನ್ನು ವಾಪಸು ಕೊಟ್ಟು ಬಿಡುತ್ತಾರೆ. ಹಳೆಯ ವರ್ಷದ ಲೆಕ್ಕವನ್ನು ವರ್ಷಕ್ಕೇ ಚುಕ್ತಾ ಮಾಡಿ ಬಿಡುವುದು ಎಂಬುದು ಇದರರ್ಥ. ಮನೆಯನ್ನು ಬಣ್ಣಬಣ್ಣದ ಕಾಗದಗಳಿಂದ ಅಲಂಕರಿ ಸುವ ಮೂಲಕ ಹೊಸ ವರ್ಷದ ಶುಭಾಶಯ ಹೊತ್ತು ತರುವ ದೇವತೆ ಯನ್ನು ಸ್ವಾಗತಿಸಲು ಮನೆ ಮಂದಿಯೆಲ್ಲಾ ಸಜ್ಜಾಗಿರುತ್ತಾರೆ. ಬಂಧು ಮಿತ್ರರು, ಕುಟುಂಬ ವರ್ಗದವರೆಲ್ಲಾ ಒಟ್ಟು ಸೇರಿ ಭರ್ಜರಿ ಔತಣ ಕೂಟ ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷಾಚರಣೆಗೆ ಮೆರುಗು ನೀಡಲಾಗುತ್ತದೆ. 10ನೆ ಶತಮಾನದಲ್ಲಿ ಸಿಡಿಮದ್ದನ್ನು ಮೊದಲು ಅನ್ವೇಷಿಸಿದವರು ಚೀನೀಯರು . ಆ ಬಳಿಕ ಚೀನೀಯರ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಪಟಾಕಿಗಳ ಹಿಮ್ಮೇಳವೂ ಸೇರಿಕೊಂಡಿತು.
ರಷ್ಯಾದಲ್ಲಿ ಹೊಸ ವರ್ಷಾಚರಣೆ
ರಷ್ಯಾದಲ್ಲಿ ಎರಡು ಹೊಸ ವರ್ಷದ ದಿನಾಚರಣೆ ನಡೆಯುತ್ತದೆ..! ಒಂದು ‘ಹಳೆಯ’ ಹೊಸ ವರ್ಷ ದಿನಾಚರಣೆ, ಇನ್ನೊಂದು ‘ಹೊಸ’ ಹೊಸ ವರ್ಷ ದಿನಾಚರಣೆ.
‘ಹಳೆಯ’ ಹೊಸ ವರ್ಷದ ದಿನಾಚರಣೆ ಜನವರಿ 14ರಂದು ನಡೆಯುತ್ತದೆ. ಈ ದಿನಾಚರಣೆ ಅಷ್ಟೊಂದು ಗೌಜಿ ಗದ್ದಲವಿಲ್ಲದೆ ನಡೆಯುತ್ತದೆ. ಹೆಚ್ಚಿನ ರಷ್ಯನ್ನರು ಮನೆಯಲ್ಲೇ ಕಾಲ ಕಳೆಯುತ್ತಾರೆ.
‘ಹೊಸ’ ಹೊಸ ವರ್ಷದ ದಿನಾಚರಣೆ ಡಿ.31ರ ರಾತ್ರಿ ಮತ್ತು ಜನವರಿ 1ರಂದು ನಡೆಯುತ್ತದೆ. ಪಟಾಕಿಗಳನ್ನು ಸಿಡಿಸುತ್ತಾ, ಸಂಗೀತ ಗೋಷ್ಠಿಗಳಿಗೆ ಭೇಟಿ ನೀಡುತ್ತಾ ದಿನವನ್ನು ಸಂತೋಷದಿಂದ ಕಳೆಯುತ್ತಾರೆ. ಡಿ.31ರಂದು ರಾತ್ರಿ ರಷ್ಯನ್ನರು ತಡವಾಗಿ ಊಟ ಮಾಡುತ್ತಾರೆ ಮತ್ತು ಅಂದಿನ ಡಿನ್ನರ್‌ಗೆ ರಷ್ಯನ್ನರ ವಿಶಿಷ್ಟ ಖಾದ್ಯ ‘ರಷ್ಯನ್ ಸಲಾದ್’ ಮತ್ತು ವೈನ್ ಇರಲೇಬೇಕು. ಒಲಿವರ್ ಸಲಾದ್ ಈ ದಿನದ ವಿಶೇಷ. ಇದು ಬಟಾಟೆ, ಕ್ಯಾರಟ್, ಉಪ್ಪಿನಕಾಯಿ, ಮೊಟ್ಟೆ, ಗ್ರೀನ್‌ಪೀಸ್, ಕೋಳಿ ಮಾಂಸ ಇತ್ಯಾದಿಗಳನ್ನು ಹೊಂದಿರುತ್ತದೆ.
ಗಡಿಯಾರದ ಮುಳ್ಳು ರಾತ್ರಿ 11.55 ಗಂಟೆ ತೋರಿಸುತ್ತಿದ್ದಂತೆಯೇ ರಷ್ಯಾದ ಅಧ್ಯಕ್ಷರು ಟಿವಿಯಲ್ಲಿ ಕಾಣಿಸಿಕೊಂಡು ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರುತ್ತಾರೆ ಮತ್ತು ಸರಕಾರದ ಸಾಧನೆಯನ್ನು ವಿವರಿಸುತ್ತಾರೆ. ಕ್ರೆಮ್ಲಿನ್ ಚೌಕದಲ್ಲಿರುವ ಗಡಿಯಾರ 12 ಗಂಟೆ ಬಾರಿಸುತ್ತಿರುವಂತೆಯೇ ರಷ್ಯಾದ ರಾಷ್ಟ್ರಗೀತೆ ಮೊಗುತ್ತದೆ. ಬಳಿಕ ಪಾರ್ಟಿಯ ಹೊತ್ತು.
ನಡುರಾತ್ರಿಯ ಬಳಿಕ ರಷ್ಯನ್ನರು ಮನೆಯಿಂದ ಹೊರ ಹೊರಡುತ್ತಾರೆ. ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷದ ಸಂಭ್ರಮ ಆಚರಿಸುತ್ತಾರೆ. ಸೋವಿಯತ್ ಒಕ್ಕೂಟದ ಅಪತ್ಯವಿದ್ದ ಕಾಲದಲ್ಲಿ ರಷ್ಯಾದಲ್ಲಿ ಕ್ರಿಸ್‌ಮಸ್ ಆಚರಣೆಗೆ ಮಹತ್ವವಿರಲಿಲ್ಲ. ಅದರ ಬದಲು ಹೊಸ ವರ್ಷಾಚರಣೆ ಸಂಭ್ರಮದಿಂದ ನಡೆಯುತ್ತಿತ್ತು. ಕ್ರಿಸ್‌ಮಸ್ ಆಚರಣೆಯ ರೀತಿಯಲ್ಲಿಯೇ ಇಲ್ಲೂ ಕೂಡಾ ಕ್ರಿಸ್‌ಮಸ್ ತಾತ ಮನೆಮನೆಗೆ ಬಂದು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾನೆ. ಆತನನ್ನು ಡೇಡ್ ಮೊರೊಜ್( ಹಿಮ ತಾತ) ಎಂದು ಕರೆಯಲಾಗುತ್ತದೆ. ಜೊತೆಯಲ್ಲಿ ತನ್ನ ಮೊಮ್ಮಗಳನ್ನೂ ಕರೆ ತರುತ್ತಾನೆ ಹಿಮತಾತ. ಅವಳ ಹೆಸರು ಸೆಗುರೊಚ(ಹಿಮಬಾಲೆ). ಮಕ್ಕಳಿಗೆ ಉಡುಗೊರೆ ಹಂಚಲು ಈಕೆ ನೆರವಾಗುತ್ತಾಳೆ. ಇಲ್ಲಿ ಕ್ರಿಸ್‌ಮಸ್ ವೃಕ್ಷದ ಬದಲು ಹೊಸ ವರ್ಷದ ವೃಕ್ಷ(ನ್ಯೂ ಇಯರ್ ಟ್ರೀ) ಯಿಂದ ಮನೆಮನೆಗಳನ್ನು ಅಲಂಕರಿಸಲಾಗುತ್ತದೆ. ಜಾಗತೀಕರಣದ ಪ್ರಭಾವದಿಂದ ಇದೀಗ ರಷ್ಯಾದಲ್ಲೂ ಕ್ರಿಸ್‌ಮಸ್ ಆಚರಣೆಗೆ ಮಹತ್ವ ಬಂದಿದೆ.
ರೋಮನ್ನರ ಹೊಸ ವರ್ಷಾಚರಣೆ
ರೋಮನ್ನರಿಗೆ ಜನವರಿ ತಿಂಗಳೆಂದರೆ ಅದು ಮಹತ್ವದ ತಿಂಗಳು. ಜಾನುಸ್ ಎಂಬ ಎರಡು ಮುಖವುಳ್ಳ ದೇವತೆಯ ಹೆಸರಿನಿಂದ ವರ್ಷದ ಆರಂಭದ ತಿಂಗಳಿಗೆ ಜನವರಿ ಎಂಬ ಹೆಸರು ಬಂದಿದೆ. ಜಾನುಸ್ ದೇವತೆ ಬದಲಾವಣೆ ಮತ್ತು ಹೊಸ ಆರಂಭದ ದೇವತೆ ಎಂದು ರೋಮನ್ನರ ನಂಬಿಕೆ. ಹಳೆಯದತ್ತ ಹಿಂದಿರುಗಿ ನೋಡುವುದು ಮತ್ತು ಹೊಸದರ ನಿರೀಕ್ಷೆಯ ಪ್ರತೀಕವಾಗಿದೆ ಜಾನಸ್ ದೇವತೆ. ಹಳೆಯ ವರ್ಷದಿಂದ ಹೊಸ ವರ್ಷಕ್ಕೆ ಪರಿವರ್ತನೆಯ ಸಂಕ್ರಮಣ ಕಾಲದ ದ್ಯೋತಕವಾಗಿ ಜಾನಸ್ ದೇವತೆಯನ್ನು ಕಾಣಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂಬ ನಿರೀಕ್ಷೆಯಲ್ಲಿ ಜಾನಸ್ ದೇವತೆಗೆ ಪೂಜೆ, ಹರಕೆ ನೆರವೇರಿಸಲಾಗುತ್ತಿತ್ತು. ಮುಂದಿನ 12 ತಿಂಗಳಿಗೆ ವೇದಿಕೆ ಸಜ್ಜುಗೊಳಿಸುವ ತಿಂಗಳೆಂದು ಜನವರಿಯನ್ನು ಕಾಣಲಾಗುತ್ತಿತ್ತು. ಸ್ನೇಹಿತರೊಂದಿಗೆ ಶುಭಾಶಯ ಮತ್ತು ಉಡುಗೊರೆ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಒವಿಡ್ ಎಂಬ ಕವಿಯ ಪ್ರಕಾರ, ಹೊಸ ವರ್ಷದ ದಿನದಂದು ಸೋಮಾರಿಯಾಗಿದ್ದರೆ ಅಥವಾ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವುದು ಅಶುಭ ಸೂಚಕ ಎಂಬುದು ಅವರ ನಂಬಿಕೆಯಾಗಿತ್ತು. ಅಂತೆಯೇ ಆದಿನ ಅರ್ಧ ದಿನವಾದರೂ ಕೆಲಸ ಮಾಡುತ್ತಿದ್ದರು ರೋಮನ್ನರು.











