ಕೆನಡದಲ್ಲಿ ಮತ್ತೆ ತಲೆಯೆತ್ತಿದ ಜನಾಂಗ ದ್ವೇಷ : ಗುರುದ್ವಾರದಲ್ಲಿ ದುಷ್ಕರ್ಮಿಗಳ ದಾಂಧಲೆ
.png)
ಟೊರಾಂಟೊ,ಡಿ.25: ಕೆನಡದ ಗುರುದ್ವಾರವೊಂದರ ಗೋಡೆಗಳಲ್ಲಿ ಕೆಲವು ದುಷ್ಕರ್ಮಿಗಳು ಜನಾಂಗೀಯ ವಿರೋಧಿ ಘೋಷಣೆಗಳುಳ್ಳ ಬರಹಗಳನ್ನು ಗೀಚಿರುವ ಘಟನೆಯೊಂದು ರವಿವಾರ ವರದಿಯಾಗಿದೆ. ಈ ಘಟನೆಯನ್ನು ಪೊಲೀಸರು ಜನಾಂಗೀಯ ದ್ವೇಷದ ಪ್ರಕರಣವೆಂದು ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಅಲ್ಬರ್ಟಾ ಪ್ರಾಂತ್ಯದ ಕ್ಯಾಲ್‌ಗರಿ ನಗರದಲ್ಲಿರುವ ಗುರುದ್ವಾರ ಕಟ್ಟಡದ ಸುತ್ತಲೂ ಆರು ಕಡೆಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಪೇಂಟ್‌ನಿಂದ ಬರೆದಿರುವುದು ಕಂಡುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ದುಷ್ಕರ್ಮಿಗಳು ಈ ಕೃತ್ಯವೆಸಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.ಏತನ್ಮಧ್ಯೆ ಕ್ಯಾಲ್‌ಗರಿಯ ಸಿಖ್ಖ್ ಸಮುದಾಯದ ಈ ಜನಾಂಗೀಯವಾದಿ ಗೂಂಡಾಗಿರಿ ಯನ್ನು ಕೆನಡದಲ್ಲಿರುವ ವಿಶ್ವ ಸಿಖ್ಖ್ ಸಂಸ್ಥೆ (ಡಬ್ಲು ಎಸ್‌ಓ) ಖಂಡಿಸಿದೆ.
ಗುರುದ್ವಾರದ ಗೋಡೆಗಳಲ್ಲಿ ಧರ್ಮನಿಂದನೆಯ ಪದಗಳನ್ನು ಬರೆದಿರುವ ಜೊತೆಗೆ ಸ್ವಸ್ತಿಕಾದ ಚಿತ್ರವನ್ನೂ ಬರೆಯಲಾಗಿದೆಯೆಂದು ಡಬ್ಲುಎಸ್‌ಓ ಹೇಳಿದೆ.
ಕ್ಯಾಲ್‌ಗರಿಯಲ್ಲಿ ಸಿಖ್ ಸಮುದಾಯದ ಮೇಲೆ ನಡೆದಿರುವ ಜನಾಂಗೀಯವಾದಿ ದಾಳಿಯಿಂದ ನಾವು ನೊಂದಿದ್ದೇವೆ. ಕೆನಡದ ಹಲವೆಡೆ ಇಸ್ಲಾಮ್‌ದ್ವೇಷಿಗಳಿಂದ ಗೂಂಡಾಗಿರಿ ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎಂದು ಅಲ್ಬರ್ಟಾದಲ್ಲಿ ಡಬ್ಲು ಎಸ್‌ಓದ ಉಪಾಧ್ಯಕ್ಷ ಹಾಗೂ ಕ್ಯಾಲ್‌ಗ್ಯಾರಿ ನಿವಾಸಿ ತೇಜಿಂದರ್ ಸಿಂಗ್ ಸಿಧು ತಿಳಿಸಿದ್ದಾರೆ.







