ಜೋಶಿ ಶತಮಾನೋತ್ಸವದ ಗೌರವ ಸನ್ಮಾನ ಪ್ರದಾನ

ಉಡುಪಿ, ಡಿ.25: ಉಡುಪಿ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ‘ರಸಿಕ ರತ್ನ’ ವಿಟ್ಲ ಜೋಷಿ ಪ್ರತಿಷ್ಠಾನ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ‘ರಸಿಕ ರತ್ನ’ ವಿಟ್ಲ ಜೋಷಿ ಜನ್ಮ ಶತಮಾನೋತ್ಸವ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಇಂದು ಹಿರಿಯ ಯಕ್ಷಗಾನ ಕಲಾವಿದರು ಸೇರಿದಂತೆ ಐವರು ಸಾಧಕರಿಗೆ ಜೋಶಿ ಶತಮಾ ನೋತ್ಸವದ ಗೌರವ ಸನ್ಮಾನವನ್ನು ಪ್ರದಾನ ಮಾಡಲಾಯಿತು.
ಯಕ್ಷಗಾನ ಕಲಾವಿದರಾದ ಗೋವಿಂದ ಭಟ್, ಕೋಳ್ಯೂರು ರಾಮ ಚಂದ್ರ ರಾವ್, ಜಯಕುಮಾರ್ ಉದ್ಯಾವರ, ಮುಖ್ಯಪ್ರಾಣ ಕಿನ್ನಿಗೋಳಿ, ನಿವೃತ್ತ ಪ್ರಾಂಶುಪಾಲ ವಾಸುದೇವ ರಾವ್ ಇವರನ್ನು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಸನ್ಮಾನಿಸಿದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಹಾಸ್ಯದ ಮೂಲಕ ಸಮಾಜಕ್ಕೆ ಉತ್ತಮ ನೈತಿಕ ಸಂದೇಶ ಸಾರಬೇಕು. ಸಮಾಜದಲ್ಲಿನ ತಪ್ಪುಗಳನ್ನು ಅಣಕವಾಡಿ ಜನರಿಗೆ ಎಚ್ಚರಿಕೆ ಮತ್ತು ಕೆಟ್ಟ ಚಾಳಿಯ ಬಗ್ಗೆ ವಿರೋಧ ವ್ಯಕ್ತಪಡಿಸುವ ಕಾರ್ಯ ಹಾಸ್ಯದ ಮೂಲಕ ಆಗಬೇಕು. ಹಾಸ್ಯ ಜನರಿಗೆ ಸಂತೋಷ,ಸಂದೇಶವನ್ನು ನೀಡುತ್ತದೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಜ್ಯ ಯುವಜನ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ.ಎನ್.ವಿಜಯಪ್ರಕಾಶ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್‌ಕುಮಾರ್ ಹೆಗ್ಡೆ, ಮಂಗಳೂರು ಎಸ್‌ಇಝೆಡ್‌ನ ನಿವೃತ್ತ ಜನರಲ್ ಮೆನೇಜರ್ ಎಸ್.ಟಿ.ಕರ್ಕೇರ, ಸಾವಿತ್ರಮ್ಮ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಹಾಸ್ಯ ಪಾತ್ರಗಳ ಮುಖವರ್ಣಿಕೆ- ಪ್ರಾತ್ಯಕ್ಷಿಕೆ ಮತ್ತು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.







