ದಿಡ್ಡಳ್ಳಿಗೆ ಪರಿಶಿಷ್ಟ ಜಾಪಂ ಆಯೋಗದ ರಾಜ್ಯಾಧ್ಯಕ್ಷ ಭೇಟಿ

ಮಡಿಕೇರಿ, ಡಿ.25 : ನಿರಾಶ್ರಿತ ಆದಿವಾಸಿಗಳಿಗೆ ಶೀಘ್ರದಲ್ಲಿ ಶಾಶ್ವತ ಸೂರು ಒದಗಿಸಲು ಸರಕಾರ ಎಲ್ಲಾ ನೆರವನ್ನು ನೀಡಲಿದೆ ಎಂದು ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಆಯೋಗದ ರಾಜ್ಯಾಧ್ಯಕ್ಷ ಎ.ಮುನಿಯಪ್ಪತಿಳಿಸಿದ್ದಾರೆ.
ಅವರು ರವಿವಾರ ಮಾಲ್ದಾರೆಯ ದಿಡ್ಡಳ್ಳಿಗೆ ಭೇಟಿ ನೀಡಿ ಗಿರಿಜನರೊಂದಿಗೆ ಮಾತನಾಡಿದರು. ಅರಣ್ಯ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಗಿರಿಜನರಿಗೆ ಯಾವುದೇ ಮಾಹಿತಿ ನೀಡದೆ ಅರಣ್ಯ ಇಲಾಖೆ ಗುಡಿಸಲುಗಳನ್ನು ನೆಲ ಸಮ ಮಾಡಿರುವ ಅಮಾನವೀಯ ಕೃತ್ಯವನ್ನು ಖಂಡಿಸಿದರು.
ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಾಜ ಕಲ್ಯಾಣ ಸಚಿವರ ಆದೇಶದ ಮೇರೆಗೆ ಕಂದಾಯ ಭೂಮಿ ಪತ್ತೆ ಹಚ್ಚಲಾಗುತ್ತಿದ್ದು, ಶೀಘ್ರ ದಲ್ಲೇ ಆದಿವಾಸಿಗಳಿಗೆ ಶಾಶ್ವತ ಸೂರು ಒದಗಿಸಲಾಗುವುದು ಎಂದರು.
ಆದಿವಾಸಿಗಳು ವಿದ್ಯಾವಂತರಾಗಬೇಕು ಹಾಗೂ ಸ್ವ ಉದ್ಯೋಗಗಳನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದು, ಆದಿವಾಸಿಗಳು ಇದರ ಸೌಲಭ್ಯವನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು. ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದ ಅವರು, ಅನಕ್ಷರತೆ ಈ ಪೀಳಿಗೆಗೆ ಮುಗಿದು ಹೋಗಲಿ ಎಂದು ಮುನಿಯಪ್ಪಸಲಹೆ ನೀಡಿದರು.
ನಿರಾಶ್ರಿತರಿಗೆ ಒದಗಿಸಲಾಗಿರುವ ಮೂಲಭೂತ ಸೌಕರ್ಯ ಹಾಗೂ ಆಹಾರವನ್ನು ಪರಿಶೀಲಿಸಿದ ಅವರು, ಒಳ್ಳೆಯ ಗುಣಮಟ್ಟದ ಆಹಾರವನ್ನು ನೀಡಬೇಕು ಹಾಗೂ ಆದಿವಾಸಿಗಳೊಂದಿಗೆ ಬೆರೆತು ಕರ್ತವ್ಯ ನಿರ್ವಹಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆದಿವಾಸಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಈಗ ತಾತ್ಕಾಲಿಕವಾಗಿ ವಾಸ ಮಾಡಿಕೊಂಡಿರುವ ಜಾಗದಲ್ಲಿ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು, ಮಕ್ಕಳನ್ನು ಚಳಿಯಿಂದ ರಕ್ಷಿಸಲು ಸ್ವೆಟರ್ ನೀಡಲಾಗುವುದು ಎಂದರು.
ಪ್ರತಿಭಟನೆ ನಡೆಸುವ ಸಂದರ್ಭ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೆತ್ತಲೆ ಪ್ರತಿಭಟನೆ ವೇಳೆ ದೌರ್ಜನ್ಯ ನಡೆಸಿದ್ದು ಸಾಬೀತಾದರೆ ಅಧಿಕಾ ರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಿರಿಜನ ಮುಖಂಡ ಜೆ.ಕೆ.ಅಪ್ಪಾಜಿ ಮಾತನಾಡಿ, ಆದಿವಾಸಿಗಳು ಅರಣ್ಯವನ್ನು ರಕ್ಷಿಸಿಕೊಂಡು ಬರುತ್ತಿದ್ದು, ಏಕರೆ ಗಟ್ಟಲೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ ಶ್ರೀಮಂತರನ್ನು ಒಕ್ಕಲೆಬ್ಬಿಸದೆ ಗುಡಿಸಲು ನಿರ್ಮಿಸಿಕೊಂಡಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ. ಪ್ರತಿಭಟನೆ ನಡೆಸಿದ ಆದಿವಾಸಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದು, ಅರಣ್ಯ ಅಧಿಕಾರಿಗಳು ಕೂಡ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಆಯೋಗದ ಸದಸ್ಯ ದಿವಾಕರ್, ಗಿರಿಜನ ನಾಯಕಿ ಮುತ್ತಮ್ಮ, ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಎಚ್.ಎಂ. ಕಾವೇರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಚಿಕ್ಕಮಾದಯ್ಯ, ಪರಿಶಿಷ್ಟ ವರ್ಗದ ಅಧಿಕಾರಿ ರಾಮೇಗೌಡ, ಲೋಹಿತ್ ಮತ್ತಿತರರು ಹಾಜರಿದ್ದರು.
ಮಕ್ಕಳ ಯೋಗಕ್ಷೇಮ ವಿಚಾರಿಸಿದ ಮಕ್ಕಳ ಕಲ್ಯಾಣ ಸಮಿತಿ
ಮಡಿಕೇರಿ ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆರತಿ ಸೋಮಯ್ಯ ಮತ್ತು ಸದಸ್ಯರ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕುವ ಜೊತೆಗೆ ನಿರಾಶ್ರಿತರೊಂದಿಗೆ ಚರ್ಚೆ ನಡೆಸಿತು.
ನಿರಾಶ್ರಿತರ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಲ್ಲಿನ ಮಕ್ಕಳ ಆರೋಗ್ಯ, ಜೀವನ ಸ್ಥಿತಿಗತಿ ಅವಲೋಕಿಸಿದ ತಂಡ, ಈ ಮಕ್ಕಳ ಪಾಲನೆ, ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಥಳೀಯ ಅಂಗನವಾಡಿ ಶಿಕ್ಷಕಿಯ ಬಳಿ ಮಾಹಿತಿ ಪಡೆಯಿತು. ಒಂದು ತಿಂಗಳ ಮಟ್ಟಿಗೆ ನಿರಾಶ್ರಿತರು ಬೀಡು ಬಿಟ್ಟಿರುವ ಈ ವ್ಯಾಪ್ತಿಯ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಖಾಲಿ ಇರುವ ಕೊಠಡಿಯಲ್ಲಿ ಅಂಗನವಾಡಿ ನಡೆಸಲು ಅವಕಾಶ ಕೋರಲಾಯಿತು. ತಟ್ಟಳ್ಳಿಯಲ್ಲಿರುವ ಅಂಗನವಾಡಿ ಶಿಕ್ಷಕಿ ಚಂದ್ರಮ್ಮ ಅವರಿಗೆ ಸೋಮವಾರದಿಂದ ಮಕ್ಕಳಿಗೆ ಚಟುವಟಿಕೆ ನಡೆಸುವಂತೆ ತಂಡ ಸೂಚಿಸಿತು.
ಅಡುಗೆ ಅನಿಲದ ಅನುಕೂಲ ಇಲ್ಲದೆ ಇರುವುದರಿಂದಾಗಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥೆಗೊಳಿಸಿರುವ ಮಧ್ಯಾ ಹ್ನದ ಊಟವನ್ನೇ ಮಕ್ಕಳಿಗೆ ನೀಡುವುದರ ಜೊತೆಗೆ ಸಂಜೆಯ ವರೆಗೆ ಮಕ್ಕಳನ್ನು ಅಂಗನವಾಡಿಯಲ್ಲೇ ಉಳಿಸಿಕೊಳ್ಳಬೇಕೆಂದು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಅವರಿಗೆ ತಂಡದ ಸದಸ್ಯರು ಸೂಚಿಸಿದರು. ಇದೇ ವೇಳೆ ನಿರಾಶ್ರಿತರ ಶಿಬಿರದಲ್ಲಿರುವ ಗರ್ಭಿಣಿ, ಬಾಣಂತಿಯರು, ಹಸುಗೂಸುಗಳ ಆರೋಗ್ಯವನ್ನೂ ತಂಡದ ಸದಸ್ಯರು ಪರಿಶೀಲಿಸಿದರು.
ತಂಡದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆರತಿ ಸೋಮಯ್ಯ, ಸದಸ್ಯೆ ಗಾಯತ್ರಿ ಕುಮಾರ್, ಬಾಲಕರ ಬಾಲಮಂದಿರದ ಅಧೀಕ್ಷಕ ಬಿ.ಡಿ.ರವೀಂದ್ರ, ಮಕ್ಕಳ ರಕ್ಷಣಾ ಘಟಕದ ಮಂಜುನಾಥ್, ವಿಶೇಷ ಬಾಲ ಪೊಲೀಸ್ ಘಟಕದ ಸುಮತಿ ಮತ್ತು ಮಹೇಶ್ ಇದ್ದರು.







