ಕೇಂದ್ರ ಸರಕಾರದಿಂದ ಕನ್ನಡ ಭಾಷೆಯ ಕಡೆಗಣನೆ: ಸಚಿವ ಮಂಜು ಆರೋಪ
ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ,
.jpg)
ಹಾಸನ, ಡಿ.25: ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದು ನಾಡಿಗೆ ಕೇಂದ್ರ ಸರಕಾರ ಮಾಡಿದ ಅಪಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಬೇಸರ ವ್ಯಕ್ತಪಡಿಸಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇತರೆ ರಾಜ್ಯಗಳಿಗಿಂತ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ನಮ್ಮ ಕನ್ನಡ ಭಾಷೆಯನ್ನು ವೈದ್ಯಕೀಯ ಕೋರ್ಸ್ ನೀಟ್ ಪರೀಕ್ಷೆಯಲ್ಲಿ ಆಯ್ಕೆ ಭಾಷೆಯಾಗಿ ಮಾನ್ಯತೆ ಮಾಡದೆ ಇರುವುದು ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಮತ್ತು ಭಾಷೆಗೆ ಮಾಡಿರುವ ಅಪಮಾನವಾಗಿದೆ ಎಂದು ನೋವಿನಿಂದ ಹೇಳಿದರು. ರಾಜ್ಯ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಕನ್ನಡ ಭಾಷೆಯ ಬಗೆಗಿನ ಗೌರವ, ಪ್ರೀತಿ, ಅಭಿಮಾನ ಕಡಿಮೆಯಾಗಬಾರದು.
ಭಾಷಾಭಿಮಾನದ ಬಗ್ಗೆ ತಮಿಳಿಗರಿಂದ ನಾವು ಕಲಿಯುವುದು ಬಹಳಷ್ಟಿದ್ದು, ಆ ರಾಜ್ಯದಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಷೆಗೆ ಮಾನ್ಯತೆ ನೀಡುತ್ತಾರೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರು ಭಾಷಾಭಿಮಾನ ಮೈಗೂಡಿಸಿಕೊಳ್ಳಬೇಕಾದ ಆವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು. ಹಿರಿಯ ಸಾಹಿತಿ ಡಾ. ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ ಶಕ್ತಿಯುತ ಸಮಾಜವನ್ನು ಕಟ್ಟಬೇಕಾದ ಯುವಕರು ಇಂದು ದುಷ್ಚಟಗಳಿಗೆ ಒಳಗಾಗಿ ತಮ್ಮ ಜವಾಬ್ದಾರಿಯನ್ನು ಮರೆತು ಸಮಾಜದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ನಮ್ಮ ಅಳಿದುಳಿದ ಸಂಸ್ಕೃತಿಯನ್ನು ಬೆಳೆಸಬೇಕಾದ ಹೊಣೆಗಾರಿಕೆ ನಮ್ಮ ಹೆಣ್ಣು ಮಕ್ಕಳ ಮೇಲಿದ್ದು, ಅವರುಗಳು ತಮ್ಮ ಜವಬ್ದಾರಿಯನ್ನು ಅರಿತು ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಉನ್ನತ ಹುದ್ದೆಗಳಲ್ಲಿ ಕೆಲಸ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣದ ಪರಿಕಲ್ಪನೆಯೆ ಇಂದು ಕಣ್ಮರೆಯಾಗುತ್ತಿದ್ದು, ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳನ್ನು ಉದ್ಯೋಗಕ್ಕಾಗಿ ಮಾತ್ರ ಸೀಮಿತಗೊಳಿಸಿ ಅವರಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಶಿಕ್ಷಕರು ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸಿ ಗೌರವ ಭರಿಸುವ ಕೆಲಸ ಮಾಡಬೇಕು. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಪಾತ್ರ ಮುಖ್ಯ ಎಂದು ಕಿವಿಮಾತು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಸ್.ಜಿ. ಸಿದ್ದರಾಮಯ್ಯ ಮಾತನಾಡುತ್ತಾ, ಕನ್ನಡದ ಸರ್ವಾಂಗೀಣ ಬೆಳವಣಿಗೆಗೆ ಸಮಾಜಮುಖಿಯಾಗಿರುವ ಸಂಸ್ಥೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದರು. ಕೇಂದ್ರದ ನಿರ್ಣಯದಿಂದ ವೈದ್ಯಕೀಯ ಶಿಕ್ಷಣಕ್ಕೆ ಹೋಗಲು ನೀಟ್ ಪರೀಕ್ಷೆಯನ್ನು ಇತರೆ ಭಾಷೆಯಲ್ಲಿ ಎದುರಿಸಬೇಕಾಗಿದೆ. ಎಲ್ಲಾ ಭಾಷೆಗಳನ್ನು ಸಮನಾಗಿ ನೋಡಬೇಕು. ಸಂವಿಧಾನ ಬದ್ಧವಾಗಿ ಆಯಾ ಭಾಷೆಗೆ ಇರುವ ಹಕ್ಕು ಎಂದರು. ಆದರೇ ಇಂತಹ ನಿರ್ಣಯದಿಂದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕ ಗಳಿಸಿದ ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮಂಗಳೂರು, ಮೈಸೂರು, ಉಡುಪಿ ಜಿಲ್ಲೆಗಳ ಪ್ರತಿ ತಾಲೂಕಿನ ಐದು ಮಂದಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ವೇಳೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿ ನಾಕಲಗೂಡು, ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರಳಿ, ಸದಸ್ಯರಾದ ದಿನೇಶ್, ರತ್ನಾಕರಶೆಟ್ಟಿ, ಸಿ.ಎಫ್. ನಾಯ್ಕ, ಪ್ರಕಾಶ್ ಎಂ. ಜೈನ್ ಇತರರು ಉಪಸ್ಥಿತರಿದ್ದರು.







