ಶಾಲಾ ಬಸ್ ಪಲ್ಟಿ: 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಸಾಗರ, ಡಿ.25: ತಾಲೂಕಿನ ತಾಳಗುಪ್ಪ ಸಮೀಪದ ಚೂರಿಕಟ್ಟೆ ಬಳಿ ಶಾಲಾ ಪ್ರವಾಸಕ್ಕೆ ಬಂದಿದ್ದ ಮಿನಿ ಬಸ್ಸೊಂದು ಪಲ್ಟಿ ಹೊಡೆದು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ್ಟರವಿವಾರ ನಡೆದಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿ ಬಿಜೆಎಸ್‌ಎಸ್ ರಾಮಪ್ಪ ರಾಯ್ಕರ್ ಪ್ರೌಢಶಾಲೆಯ 32 ವಿದ್ಯಾರ್ಥಿಗಳು ಪ್ರವಾಸ ಬಂದಿದ್ದರು. ರವಿ ವಾರ ಸಂಜೆ ಜೋಗ ಜಲಪಾತ ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಚೂರಿಕಟ್ಟೆ ಸಮೀಪ ತಿರುವಿನಲ್ಲಿ ಇರುವ ಹಂಪ್ ಗುರುತಿಸುವಲ್ಲಿ ಚಾಲಕ ವಿಫಲವಾಗಿ, ನಿಯಂತ್ರಣ ತಪ್ಪಿಮಿನಿ ಬಸ್ ಅಪಘಾತಕ್ಕೆ ಈಡಾಗಿದೆ.
ಅಪಘಾತದಲ್ಲಿ 29ವರ್ಷದ ಕ್ಲೀನರ್ ನಾಗರಾಜ್, ವಿದ್ಯಾರ್ಥಿಗಳಾದ 16 ವರ್ಷದ ಕುಮಾರ್ ಹಾಗೂ 15 ವರ್ಷದ ಮಾಲತೇಶ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕ ಸಂತೋಷ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ನಡೆದ ಸ್ಥಳಕ್ಕೆ ಜಮಅತೆ ಇಸ್ಲಾಂ ಹಿಂದ್ ಸಂಘಟನೆಯ ಸದಸ್ಯರು ಭೇಟಿ ನೀಡಿ, 108 ಆ್ಯಂಬುಲೆನ್ಸ್ ಜೊತೆಗೆ ತಮ್ಮ ವಾಹನಗಳಲ್ಲಿ ಗಾಯಳುಗಳನ್ನು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಪ್ರಕರಣ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ.







