ಸಂಸ್ಕೃತ ಭಾವನಾತ್ಮಕ ಭಾಷೆ: ಪೇಜಾವರ ಶ್ರೀ

ಉಡುಪಿ, ಡಿ.25: ನಮ್ಮ ದೇಶದ ಮೂಲ ಭಾಷೆಯಾಗಿರುವ ಸಂಸ್ಕೃತ ಭಾವನಾತ್ಮಕ ಭಾಷೆ. ಸಂಸ್ಕೃತದಲ್ಲೇ ಹೆಚ್ಚು ಸಂವಾದ ನಡೆಸುವುದರಿಂದ ಮಾತ್ರ ಆ ಭಾಷೆ ಜೀವಂತವಾಗಿರಿಸಲು ಸಾಧ್ಯ. ಆಂಗ್ಲ ಭಾಷೆಗಿಂತ ಸಂಸ್ಕೃತ ಭಾಷೆ ಸುಲಭ. ಸಂಸ್ಕೃತದಲ್ಲೇ ಸಂವಹನ ನಡೆಸಿದರೆ ಆ ಭಾಷೆ ನಮಗೆ ಕಷ್ಟ ಎಂದೆನಿ ಸಲು ಸಾಧ್ಯವಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ವಿದ್ಯೋದಯ ಪದವಿಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ರವಿವಾರ ಸಂಸ್ಕೃತ ಭಾರತಿಯು ಅಖಿಲ ಭಾರತ ಸಂಸ್ಕೃತ ಅಧಿವೇಶನದ ಅಂಗವಾಗಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಅಷ್ಟೋತ್ತರ ಸಂಸ್ಕೃತ ಸಂಭಾಷಣಾ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಬೈಲೂರು ರಾಮಕೃಷ್ಣಾಶ್ರಮದ ಸ್ವಾಮಿ ವಿನಾಯಕಾನಂದಾಜಿ ಮಹಾ ರಾಜ್ ಮಾತನಾಡಿ, ಸಂಸ್ಕೃತಿ ಸಂಸ್ಕೃತ ಭಾಷೆಯ ಆಧಾರವಾಗಿದೆ. ಆಧ್ಯಾತ್ಮಿಕ ಭಾವನೆಯನ್ನು ಸಂಸ್ಕೃತ ಜಾಗೃತಗೊಳಿಸುತ್ತದೆ. ಆಂಗ್ಲ, ಸ್ಪೆನಿಷ್ ಮುಂತಾದ ಭಾಷೆಗಳು ಮನುಷ್ಯನ ಬುದ್ದಿಯಿಂದ ಹುಟ್ಟಿದರೆ, ಸಂಸ್ಕೃತ ಭಾವನಾತ್ಮಕವಾದ ಹೃದಯದಿಂದ ಬಂದ ಭಾಷೆ. ದೈವಿಕ ಭಾವನೆಯುಳ್ಳ ಸಂಸ್ಕೃತದಿಂದ ಆಧ್ಯಾತ್ಮಿಕ ಸಾಧನೆ ಸಾಧ್ಯ ಎಂದು ಹೇಳಿದರು.
ಗುಡ್ಡೆಯಂಗಡಿಯಲ್ಲಿ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ ಭಾಗವಹಿಸಿದ ಕೊರಗ ಸಮುದಾಯದ ಗುರುವ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.
ಸಂಸ್ಕೃತ ಭಾರತಿ ಸಂಪರ್ಕ ಪ್ರಮುಖ ಸತ್ಯನಾರಾಯಣ ಭಟ್ ದಿಕ್ಸೂಚಿ ಭಾಷಣ ಮಾಡಿದರು.
ಸಂಸ್ಕೃತ ಭಾರತಿಯ ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ, ಶೃಂಗೇರಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಶಿಕ್ಷಾಶಾಸ್ತ್ರಿ ವಿಭಾಗಾಧ್ಯಕ್ಷ ಡಾ. ಚಂದ್ರಕಾಂತ ಭಟ್ ಉಪಸ್ಥಿತರಿದ್ದರು.
ಶ್ರೀಹರಿ ಕಾರ್ಯಕ್ರಮ ನಿರೂಪಿಸಿದರು.







