ಹೆಚ್ಚುತ್ತಿರುವ ದಡಾರ, ರುಬೆಲ್ಲಾ ಪ್ರಕರಣಗಳು ಲಸಿಕಾ ಆಂದೋಲನ ನಡೆಸಲು ನಿರ್ಧಾರ: ಡಿಸಿ
ಶಿವಮೊಗ್ಗ, ಡಿ. 25: ಇತ್ತೀಚಿನ ದಿನಗಳಲ್ಲಿ ದಡಾರ ಮತ್ತು ರುಬೆಲ್ಲಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ 2017ರ ಫೆಬ್ರವರಿ ಮಾಹೆಯಲ್ಲಿ ದಡಾರ ಮತ್ತು ಲಸಿಕಾ ಆಂದೋಲನವನ್ನು ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕೆ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ರತೀ ಒಂದು ಲಕ್ಷ ಮಕ್ಕಳಲ್ಲಿ 100-150ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಗರ್ಭಾವಸ್ಥೆಯಲ್ಲೇ ಮಕ್ಕಳಿಗೆ ಈ ರೋಗದ ಲಕ್ಷಣಗಳುಕಂಡುಬರುತ್ತಿವೆ.ಈರೋಗದ ನಿಯಂತ್ರಣ ಕ್ರಮವಾಗಿ 9ತಿಂಗಳಿಂದ 15ವರ್ಷದೊಳಗಿನ 4.20ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.23ರಷ್ಟು ಮಕ್ಕಳು 15ವರ್ಷದೊಳಗಿನವರಾಗಿದ್ದಾರೆ ಎಂದವರು ತಿಳಿಸಿದರು. ಈ ಲಸಿಕಾ ಆಂದೋಲನದಲ್ಲಿ ನಿಗದಿಪಡಿಸಿದ ವಯೋಮಿತಿಯೊಳಗಿನ ಯಾವುದೇ ಮಕ್ಕಳು ಹೊರಗುಳಿಯದಂತೆ ಗಮನಿಸಲಾಗಿದ್ದು, ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲಾಗಿದೆ.
ಈ ಲಸಿಕೆ ಹಾಕುವ ದಿನಗಳಂದು ಶಾಲಾ ಆವರಣವನ್ನು ತಳಿರು-ತೋರಣಗಳಿಂದ ಶೃಂಗರಿಸಿ, ಹಬ್ಬದ ವಾತಾವರಣವನ್ನು ನಿರ್ಮಿಸಿ, ಆರೋಗ್ಯದಿನವನ್ನು ಆಚರಿಸಬೇಕು. 6ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ದಿನದಂದು ಪೋಷಕರು ತಮ್ಮ ಮಕ್ಕಳೊಂದಿಗೆ ಶಾಲೆಗೆ ಹೋಗುವಂತೆ ಜಿಲ್ಲಾಧಿಕಾರಿಗಳು ಪೋಷಕರಲ್ಲಿ ವಿನಂತಿಸಿದ್ದಾರೆ.
ಲಸಿಕಾ ದಿನಕ್ಕೆ ಮುನ್ನ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಪೋಷಕರ ಸಭೆ ನಡೆಸಿ, ಲಸಿಕೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು. ಅಂತೆಯೇ ಈ ಕಾರ್ಯಕ್ರಮದ ಯಶಸ್ವಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು, ಆರೋಗ್ಯ ಸಹಾಯಕಿಯರ ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಳ್ಳಬೇಕೆಂದವರು ನುಡಿದರು.
ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ, ಎರಡು ಮತ್ತು ಮೂರನೆ ವಾರದಲ್ಲಿ ಅಂಗನವಾಡಿ ಮತ್ತು ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದ ಅವರು, ಈ ಕಾರ್ಯಕ್ರಮದ ಯಶಸ್ಸ್ಸಿಗೆ ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಇಲಾಖೆ ಸೇರಿ
ದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.







