ಕಾರವಾರ: ಡಿಸಿ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಕಾರವಾರ, ಡಿ. 25: ನಗರದ ಜಿಲ್ಲಾಧಿಕಾರಿ ಕಚೇರಿಯ ಶೌಚಾಲಯದಲ್ಲಿ ಯುವಕನೊಬ್ಬ ಗಾಜಿನ ಚೂರಿನಿಂದ ಕತ್ತು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ನಡೆದಿದೆ. ರಕ್ತದಿಂದ ಮುಳಗಿದ್ದ ವ್ಯಕ್ತಿಗೆ ತಕ್ಷಣ ಪೊಲೀಸರು ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರುಗೊಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅಂಕೋಲಾ ತಾಲೂಕಿನ ಖೇಣಿಯ ಕುಮಾರ್ ನಾಯಕ ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಜೆ ಸಂದಭರ್ದಲ್ಲಿಯೂ ಸಾಮಾನ್ಯವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಆಗಮಿಸುತ್ತಾರೆ. ಕಳೆದ ಎರಡು ತಿಂಗಳಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಪೊಲೀಸರು ಅವನನ್ನು ಹೆದರಿಸಿ ಬೆದರಿಸಿ ಓಡಿಸುತ್ತಿದ್ದರು. ಆದರೆ ರವಿವಾರ ಪೊಲೀಸ್ ಕಾವಲುಗಾರರು ಇಲ್ಲದ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಒಳಗೆ ಪ್ರವೇಶಿಸಿದ್ದಾನೆ.
ಶೌಚಾಲಯದ ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿ ಟೈಲ್ಸ್ ಹಾಗೂ ನೀರಿನ ಪೈಪ್‌ಗಳನ್ನು ಒಡೆದು ಹಾಕಲು ಪ್ರಯತ್ನಿಸಿದ್ದಾನೆ. ಇದರಿಂದ ಆತಂಕಗೊಂಡ ದುರಸ್ತಿಗೆ ಬಂದ ಕಾರ್ಮಿಕರು ನಗರಸಭೆಗೆ ಕರೆ ಮಾಡಿ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಚೇತರಿಸಿಕೊಂಡ ಆತ ತನ್ನ ಪರಿಚಯ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದರು. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ.





