ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಹಂಡಿಬಾಗ್ ಕುಟುಂಬ

ಚಿಕ್ಕಮಗಳೂರು, ಡಿ.25: ಡಿವೈಎಸ್ಪಿಯಾಗಿದ್ದ ಕಲ್ಲಪ್ಪಹಂಡಿಬಾಗ್ ಅವರ ಕುಟುಂಬ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಮುಂದೆ ಕುಟುಂಬದ ಗೋಳು ಹೇಳಿಕೊಂಡು ಕಣ್ಣೀರಿಟ್ಟ ಘಟನೆ ರವಿವಾರ ನಗರದಲ್ಲಿ ನಡೆಯಿತು.
ಡಿವೈಎಸ್ಪಿಯಾಗಿದ್ದ ಕಲ್ಲಪ್ಪಹಂಡಿಬಾಗ್ ಅವರ ತಂದೆ ಬಸಪ್ಪ, ತಾಯಿ ಬಸವ್ವ ಹಾಗೂ ಸಹೋದರ ನಾಗಪ್ಪ ಹಂಡಿಬಾಗ್ ಅವರ ಕೆಜಿಐಡಿ ವಿಮೆ ಪಡೆಯುವ ಸಲುವಾಗಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಅವರನ್ನು ಭೇಟಿಯಾಗಲು ಚಿಕ್ಕಮಗಳೂರಿಗೆ ಆಗಮಿಸಿದ್ದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮಾಧ್ಯಮದೊಂದಿಗೆ ಮಾತನಾಡಿದ ಬಸಪ್ಪ ಹಾಗೂ ಬಸವ್ವ ಮಗನ ಸಾವು ಮತ್ತು ತಮ್ಮ ಜೀವನದ ಸಂಕಷ್ಟಗಳನ್ನು ನೆನೆದು ಕಣ್ಣೀರಿಟ್ಟರು. ಸೊಸೆಗೆ ಸರಕಾರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಉದ್ಯೋಗ ಕಲ್ಪಿಸಿದೆ. ಪಿಂಚಣಿಯೂ ಅವರಿಗೆ ಬರುತ್ತಿದೆ ಎಂದರು.
ಈಗ ಸರಕಾರ 30 ಲಕ್ಷ ರೂ. ನೆರವು ಕೊಡುತ್ತಿದ್ದು, ವಯಸ್ಸಾದ ನಮಗೆ ಕೊಟ್ಟರೆ ಅನುಕೂಲವಾಗುತ್ತದೆ. ಮದುವೆ ವಯಸ್ಸಿನ ಮಗಳಿದ್ದಾಳೆ. ಪಿಯುಸಿ ಓದುತ್ತಿರುವ ಮಗನಿದ್ದಾನೆ. ನಾನು ಅಂಗವಿಕಲನಾಗಿದ್ದು, ದುಡಿದು ತಿನ್ನುವ ಶಕ್ತಿ ಇಲ್ಲ. ಗಾಯತ್ರಿಯಮ್ಮ ಮತ್ತು ಶಾಸಕರು ಬೆಂಗಳೂರಿನಲ್ಲಿ ಕೊಟ್ಟ 8 ಲಕ್ಷ ರೂಪಾಯಿಗಳಿಂದ ಜೀವನ ಸಾಗಿಸುತ್ತಿದ್ದೇವೆ. ಕಲ್ಲಪ್ಪ ಹಂಡಿಬಾಗ್ ಸಾವಿನಿಂದ ಬೆಂದಿದ್ದ ಸಂದಭರ್ದಲ್ಲೇ ಮತ್ತೊಬ್ಬ ಮಗ ಅಪಘಾತದಿಂದ ಮೃತಪಟ್ಟ. ಈ ಎಲ್ಲ ನೋವುಗಳು ನಮ್ಮನ್ನು ಹಿಂಡುತ್ತಿವೆ ಎಂದು ಅಳಲು ತೋಡಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಕೂಲ ಮಾಡಿಕೊಟ್ಟಿದ್ದಾರೆ. ಮುಂದೆ ನಮ್ಮ ಕುಟುಂಬದ ಜೀವನ ನಡೆಯಬೇಕು ಎಂದರೆ ನನ್ನ ಕಿರಿಯ ಮಗನಿಗೆ ಸರಕಾರದಿಂದ ಒಂದು ಉದ್ಯೋಗ ದೊರಕಬೇಕು. ಇಲ್ಲವಾದಲ್ಲಿ ನಮ್ಮ ಜೀವನ ನೋವಿನಲ್ಲೇ ಅಂತ್ಯಗೊಳ್ಳುತ್ತದೆ ಎಂದರು.
ನಮ್ಮ ಭರವಸೆಯನ್ನು ಮುಖ್ಯ ಮಂತ್ರಿಗಳು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಗಾಯತ್ರಿ ಶಾಂತೇಗೌಡ ಅವರು ನಮಗೆ ಸಹಾಯ ಮಾಡಿದ್ದಾರೆ. ಚಿಕ್ಕಮಗಳೂರಿಗೆ ಆಗಮಿಸಿದ್ದ ಕಾರಣ ಅವರನ್ನು ಭೇಟಿಯಾಗುವ ಉದ್ದೇಶದಿಂದ ಬಂದಿರುವುದಾಗಿ ತಿಳಿಸಿದರು.
ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ನಾವೆಲ್ಲ ಸೇರಿ ಬಸಪ್ಪ ಕುಟುಂಬಕ್ಕೆ 8 ಲಕ್ಷ ರೂ.ಗಳ ನೆರವು ನೀಡಿದ್ದೇವೆ. ಈಗ ಸರಕಾರ ಘೋಷಿಸಿರುವ 30 ಲಕ್ಷ ರೂ. ನೆರವನ್ನು ನಮಗೆ ಕೊಡಿಸಿ ಎಂದು ಕಲ್ಲಪ್ಪಅವರ ತಂದೆ ತಾಯಿ ಮನವಿ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಕಿರಿಯ ಮಗ ನಾಗಪ್ಪಅವರಿಗೆ ಉದ್ಯೋಗಕ್ಕಾಗಿ ಮನವಿ ಮಾಡಿದ್ದಾರೆ. ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ವೇಳೆ ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿರಿದ್ದರು.







