ನ್ಯಾಯವಾದಿ ಬಿ.ವಿ.ಆಚಾರ್ಯಗೆ ‘ಸಮಾಜರತ್ನ’ ಪುರಸ್ಕಾರ

ಉಡುಪಿ, ಡಿ.25: ನಾಡಿನ ಹಿರಿಯ ನ್ಯಾಯವಾದಿ, 50ಕ್ಕೂ ಅಧಿಕ ವರ್ಷ ಗಳಿಂದ ನಾಡಿಗೆ ನ್ಯಾಯಾಂಗ ಸೇವೆ ಸಲ್ಲಿಸುತ್ತಿರುವ ಬೆಳಪು ವಾಸುದೇವ ಆಚಾರ್ಯರಿಗೆ ಪರ್ಯಾಯ ಶ್ರೀ ಪೇಜಾವರ ಮಠದ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ‘ಸಮಾಜರತ್ನ’ ಬಿರುದಿನೊಂದಿಗೆ ಸನ್ಮಾನಿಸಿದರು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಂದೇಶ ನೀಡಿದ ಶ್ರೀಗಳು, ಐದು ದಶಕಗಳಿಂದ ಆಚಾರ್ಯರಿಂದ ನಾಡಿಗೆ ಅಮೂಲ್ಯ ನ್ಯಾಯಾಂಗ ಸೇವೆ ಸಂದಿದೆ. ಅನೇಕ ವಿಶೇಷ ಪ್ರಕರಣಗಳಲ್ಲಿ ಸರಕಾರಿ ಅಭಿಯೋಜಕರಾಗಿ, ವಿವಿಧ ಕಾನೂನು ಆಯೋಗಗಳ ಸದಸ್ಯರಾಗಿ ಐದು ಬಾರಿ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ಸರಕಾರಕ್ಕೆ ಮತ್ತು ಸಮಾಜಕ್ಕೆ ಆಚಾರ್ಯರು ನೀಡಿದ ಮಾರ್ಗದರ್ಶನ ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು ಆಚಾರ್ಯರ ಬಹುಮುಖಿ ನ್ಯಾಯಾಂಗ ಸೇವೆಯನ್ನು ವಿವರಿಸಿದರು. ಲಕ್ಷ್ಮೀ ಆಚಾರ್ಯ ಮತುತಿ ಅಶೋಕ್ ಹಾರ್ನಳ್ಳಿ ಅವರನ್ನೂ ಶ್ರೀಪಾದರು ಸನ್ಮಾನಿಸಿದರು.
ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ದಿವಾನ ರಘುರಾಮಾಚಾರ್ಯ, ವಕೀಲ ಪ್ರದೀಪ್ ರಾವ್ ಉಪಸ್ಥಿತರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





