ಮೂಡುಬಿದಿರೆ ಜೈನಮಠದ ಯಾತ್ರಿ ನಿವಾಸ ಲೋಕಾರ್ಪಣೆ

ಮೂಡುಬಿದಿರೆ, ಡಿ.25 : ಅಭಿವೃದ್ಧಿ ಹೊಂದುತ್ತಿರುವ ಜೈನಕಾಶಿಗೆ ಯಾತ್ರಿ ನಿವಾಸದ ಅವಶ್ಯಕತೆ ಇತ್ತು. 2016ರ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಮಂಜೂರಾದ ಒಂದು ಕೋಟಿ ರೂ ಅನುದಾನದಲ್ಲಿ ಮೂಡುಬಿದಿರೆಯಲ್ಲಿ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ಕಟೀಲಿನಲ್ಲಿ ನಿರ್ಮಾಣಗೊಂಡಿರುವ ಯಾತ್ರಿ ನಿವಾಸಕ್ಕೆ 1 ಕೋಟಿ ಮಂಜೂರಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. 50 ಲಕ್ಷ ರೂ.ವೆಚ್ಚದಲ್ಲಿ ಬಪ್ಪನಾಡಿನಲ್ಲಿ ಯಾತ್ರಿ ನಿವಾಸ ನಿರ್ಮಾಣ ಕೆಲಸ ನಡೆಯುತ್ತಿದೆ. ಶ್ರವಣಬೆಳಗೊಳ ಮಹಾಮಸ್ತಾಭಿಷೇಕ ಅನುದಾನದಲ್ಲಿ ಮೂಡುಬಿದಿರೆ ಬಸದಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಅಲ್ಲದೆ ಮೂಡುಬಿದಿರೆಯ ಯಾತ್ರಿ ನಿವಾಸವನ್ನು ಮೇಲ್ದರ್ಜೆಗೇರಿಸಲು ಪುನಃ ಒಂದೂವರೆ ಕೋಟಿಯನ್ನು ಬಿಡುಗಡೆಗೊಳಿಸುವ ಕೆಲಸ ಸರ್ಕಾರದಿಂದ ಆಗಲಿದೆ ಎಂದು ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಭರವಸೆ ನೀಡಿದರು.
ಅವರು ಕರ್ನಾಟಕ ಸರ್ಕಾರದ ನಿರ್ಮಿತಿ ಕೇಂದ್ರದಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಮೂಡುಬಿದಿರೆ ಸಾವಿರ ಕಂಬದ ಬಸದಿ ಬಳಿ ನಿರ್ಮಾಣಗೊಂಡಿರುವ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡಿದರು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿ ಸಮುದಾಯದ ಸು:ಖ, ಸಂತಸ ಮತ್ತು ಸಮೃದ್ಧಿಗಾಗಿ ಪಣ ತೊಡುವವರೇ ನಿಜವಾದ ತ್ಯಾಗಿಗಳು. ಆಗಮ ಗ್ರಂಥಗಳ ಮೂಲವಿರುವ ಮೂಡುಬಿದಿರೆಯಲ್ಲಿ ಜೈನ ಧರ್ಮದ ಕುರಿತು ಸಂಶೋಧನೆಗೆ ವಿಫುಲ ಅವಕಾಶವಿದೆ. ಇದಕ್ಕೆ ಪೂರಕವಾಗಿ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಸರ್ಕಾರದ ಅನುದಾನ ಅವಶ್ಯಕತೆಯಿದೆ. ಬಸದಿಗಳ ರಕ್ಷಣೆಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಪೂರಕವಾದ ನೆರವು ಸರ್ಕಾರದಿಂದ ಸಿಗಬೇಕಾಗಿದೆ. ಪ್ರವಾಸಿ ಜೈನ ಕೇಂದ್ರದ ಪಟ್ಟಿಯಲ್ಲಿ ಮೂಡುಬಿದಿರೆಯಿರುವುದರಿಂದ ರಸ್ತೆ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಸುವ್ಯವಸ್ಥೆಗೆ ತರುವ ಕೆಲಸ ಸ್ಥಳೀಯಾಡಳಿತ ಹಾಗೂ ರಾಜ್ಯ, ಕೇಂದ್ರ ಸರ್ಕಾರದಿಂದಾಗಬೇಕಾಗಿದೆ ಎಂದರು.
ದಾನಿ ಡಾ.ಪದ್ಮಜೀಥ ನಾಡಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಇಂಜಿನಿಯರ್ ಶರತ್ ಕುಮಾರ್, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಸದಸ್ಯ ಬಾಹುಬಲಿ ಪ್ರಸಾದ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ಬಸದಿಗಳ ಮೊಕ್ತೇಸರರಾದ ದಿನೇಶ್ ಆನಡ್ಕ, ಪಟ್ಣಶೆಟ್ಟಿ ಸುದೇಶ್ ಕುಮಾರ್, ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ವೇದಿಕೆಯಲ್ಲಿದ್ದರು.
ಸ್ವಸ್ತಿಶ್ರೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸೌಮಶ್ರೀ ಸನ್ಮಾನಪತ್ರ ವಾಚಿಸಿದರು.
ನಮಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಮಾಣಿಕ್ಯರಾಹ್ ಶೈಲೇಂದ್ರ ಕುಮಾರ್, ಜಯರಾಜ್ ಕಂಬಳಿ, ರಂಜನ್ ಪೂವಣಿ ಅತಿಥಿಗಳನ್ನು ಗೌರವಿಸಿದರು.
ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ವಂದಿಸಿದರು. --
ಜೈನ ಮಠದ ಬಳಿ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಠದಿಂದ ಶ್ರಮಿಸಲಾಗುತ್ತಿದೆ. ಆದರೆ ರಸ್ತೆ ಅಗಲೀಕರಣಗೊಳಿಸಲು ಖಾಸಗಿ ಜಾಗಗಳ ಸಮಸ್ಯೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಸರದ ಜೈನರು ಹಾಗೂ ಇತರರು ಭೂದಾನವನ್ನು ಮಾಡುವ ಮೂಲಕ ಹೃದಯ ಶ್ರೀಮಂತಿಕೆಯನ್ನು ತೋರಿಸಬೇಕಾಗಿದೆ ಎಂದು ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮೂಡುಬಿದಿರೆ ಜೈನ ಮಠ ಹೇಳಿದರು.







