ಬೊಳ್ವಾರು ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೆ 48ರ ಸಂಭ್ರಮ

ಪುತ್ತೂರು, ಡಿ.25 : ಬೊಳೂವಾರು ಆಂಜನೇಯ ಯಕ್ಷಗಾನ ಕಲಾ ಸಂಘ, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘ ಇದರ ವಾರ್ಷಿಕ ಸಂಭ್ರಮ "ಶ್ರೀ ಆಂಜನೇಯ 48" ದ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಯಕ್ಷಾಂಜನೇಯ, ಬೊಳ್ಳಿಂಬಳ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.
ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆದು, ಬಳಿಕ ಯಕ್ಷಗಾನದ ಮಟ್ಟು-ಪ್ರಾತ್ಯಕ್ಷಿಕೆ ನಡೆಯಿತು. ಮಧ್ಯಾಹ್ನ ಭವ್ರಶ್ರೀ ಕುಲ್ಕುಂದ ಇವರ ಭಾಗವತಿಕೆಯಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಪ್ರಸ್ತುತಿಯೊಂದಿಗೆ "ಯಕ್ಷಗಾನ ಪಾತ್ರ ಪ್ರವೇಶ" ನಡೆಯಿತು.
ಬಳಿಕ ಸಭಾ ಕಲಾಪ ನಡೆಯಿತು.
ಯಕ್ಷಾಂಜನೇಯ, ಬೊಳ್ಳಿಂಬಳ ಪ್ರಶಸ್ತಿ ಪ್ರದಾನ:
ದಿ. ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ ಪಾಣಾಜೆ ಇವರಿಂದ ಕೊಡಮಾಡುವ ‘ಬೊಳ್ಳಿಂಬಳ ಪ್ರಶಸ್ತಿ’ಯನ್ನು ಭಾಗವತ ಜಯರಾಮ ಕುದ್ರೆತ್ತಾಯರವರಿಗೆ ಪ್ರದಾನ ಮಾಡಲಾಯಿತು. ಗುಂಡ್ಯಡ್ಕ ಈಶ್ವರ ಭಟ್‌ರವರು ಸನ್ಮಾನಿತರ ಪರಿಚಯ ನೀಡಿದರು, ಶುಭಾ ಗಣೇಶ್‌ರವರು ಸನ್ಮಾನ ಪತ್ರ ವಾಚಿಸಿದರು.
ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಕೊಡಮಾಡುವ ‘ಯಕ್ಷಾಂಜನೇಯ ಪ್ರಶಸ್ತಿ’ಯನ್ನು ಕಟೀಲು ಮೇಳದ ಭಾಗವತ, ಪ್ರಸಂಗಕರ್ತರು ಆದ ಪುರುಷೋತ್ತಮ ಪೂಂಜ ದಂಪತಿಗಳಿಗೆ ಪ್ರದಾನ ಮಾಡಲಾಯಿತು.
ಕರ್ನಾಟಕ ಬ್ಯಾಂಕ್‌ನ ಕೃಷ್ಣಪ್ರಕಾಶ್ ಉಳಿತ್ತಾಯರವರು ಸನ್ಮಾನಿತರ ಪರಿಚಯ ನೀಡಿದರು. ಕಿಶೋರಿ ದುಗ್ಗಪ್ಪರವರು ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ:
ಯಕ್ಷಗಾನ ಕ್ಷೇತ್ರದಲ್ಲಿ ತೆಂಕು, ಬಡಗು ತಿಟ್ಟಿನಲ್ಲಿ 52 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರೊ. ಎಂ.ಎಲ್ ಸಾಮಗ ಅಧ್ಯಕ್ಷತೆ ವಹಿಸಿದ್ದರು.
ಸ್ವರ್ಣೋದ್ಯಮಿ ಮುಳಿಯ ಶ್ಯಾಮ ಭಟ್ ಮುಖ್ಯಅತಿಥಿಯಾಗಿದ್ದರು. ಮೂಡಬಿದ್ರೆ ಶ್ರೀ ವಿಜಯಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಅನಂತಕೃಷ್ಣ ರಾವ್ ಶೇವಿರೆ ಶುಭಾಶಂಸನೆಗೈದರು. ದಿ. ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನನದ ಅಧ್ಯಕ್ಷ ಬಿ.ಎಸ್ ಓಕುಣ್ಣಾಯರವರು ಅಭಿನಂದನೆ ಸಲ್ಲಿಸಿ ಮಾತನಾಡಿದರು. ಬೊಳುವಾರು ಆಂಜನೇಯ ಯಕ್ಷಗಾನ ಸಂಘದ ಗೌರವಾಧ್ಯಕ್ಷ ಪಿ. ರಮಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ವಂದಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಲಾಪದ ಬಳಿಕ ಸುಗ್ರೀವ-ವಾಲಿ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.







