ಪ್ರೊ ಕುಸ್ತಿ ಲೀಗ್: ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಫೋಗತ್ ಸಹೋದರಿಯರು

ಹೊಸದಿಲ್ಲಿ, ಡಿ.25: ‘‘ಇತ್ತೀಚೆಗೆ ಬಿಡುಗಡೆಯಾಗಿರುವ ಆಮಿರ್ ಖಾನ್ ಅಭಿನಯದ ‘ದಂಗಲ್’ ಸಿನೆಮಾ ಉತ್ತರ ಪ್ರದೇಶದ ಫ್ರಾಂಚೈಸಿ ಪರ ಪ್ರೊ ಕುಸ್ತಿ ಲೀಗ್ ಪ್ರಶಸ್ತಿ ಗೆಲ್ಲಲು ಸ್ಫ್ಫೂರ್ತಿಯಾಗಿದೆ’’ಎಂದು ಎರಡನೆ ಆವೃತ್ತಿಯ ಕುಸ್ತಿ ಲೀಗ್‌ಗೆ ತಯಾರಿ ನಡೆಸುತ್ತಿರುವ ಗೀತಾ ಫೋಗತ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಆಮಿರ್ ಖಾನ್ ಅವರು ಫೋಗತ್ ಕುಟುಂಬಸ್ಥರು ಹಾಗೂ ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್‌ಗೆ ‘ದಂಗಲ್’ ಸಿನೆಮಾದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ‘ದಂಗಲ್’ ಚಿತ್ರವನ್ನು ವೀಕ್ಷಿಸಿರುವುದು ನನ್ನ ಹಾಗೂ ನನ್ನ ಕುಟುಂಬಕ್ಕೆ ಹೆಮ್ಮೆ ತಂದಿದೆ ಎಂದು ಗೀತಾ ಹೇಳಿದ್ದಾರೆ.
‘‘ದಂಗಲ್ ಸಿನೆಮಾ ನನಗೆ ಹಾಗೂ ಸಹೋದರಿ ಬಬಿತಾ ಕುಮಾರಿಗೆ ಕುಸ್ತಿ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿಯಾಗಿದೆ. ಕುಸ್ತಿ ಲೀಗ್‌ನಲ್ಲಿ ದೇಶ-ವಿದೇಶದ ಶ್ರೇಷ್ಠ ಕುಸ್ತಿಪಟುಗಳು ಭಾಗವಹಿಸುತ್ತಾರೆ’’ ಎಂದು ಗೀತಾ ಹೇಳಿದರು.
ಸಹೋದರಿಯ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ ಬಬಿತಾ,‘‘ಈ ಸಿನೆಮಾ ಕ್ರೀಡೆಯ ನೈಜ ಸ್ಫೂರ್ತಿಯನ್ನು ಬಿಂಬಿಸುತ್ತಿದೆ’’ ಎಂದರು.
ಗೀತಾ ಹಾಗೂ ಬಬಿತಾ ಫೋಗತ್ ಜೀವನಾಧಾರಿತ ‘ದಂಗಲ್’ ಸಿನೆಮಾ ಬಿಡುಗಡೆಯ ಬಳಿಕ ಈ ಇಬ್ಬರು ದೇಶದೆಲ್ಲೆಡೆ ಮನೆ ಮಾತಾಗಿದ್ದಾರೆ. ಈ ಇಬ್ಬರು ಸಹೋದರಿಯರು ತಮ್ಮ ತಂಡದಲ್ಲಿರುವುದಕ್ಕೆ ಉತ್ತರ ಪ್ರದೇಶ ಫ್ರಾಂಚೈಸಿ ಸಂತಸ ವ್ಯಕ್ತಪಡಿಸಿದೆ.
2010ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗೀತಾ ಚಿನ್ನದ ಪದಕ ಜಯಿಸಿದ್ದಾರೆ. ಸಹೋದರಿ ಬಬಿತಾ ಬೆಳ್ಳಿ ಪದಕ ಜಯಿಸಿದ್ದರು. ಆ ನಂತರ ಈ ಇಬ್ಬರು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದರು. ಗೀತಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದರು. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಬಬಿತಾ ತನ್ನ ಹಿಂದಿನ ಸಾಧನೆ ಉತ್ತಮಪಡಿಸಿಕೊಂಡಿದ್ದರು. ಈ ಸಾಧನೆಯ ಮೂಲಕ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
58 ಕೆಜಿ ತೂಕ ವಿಭಾಗದಲ್ಲಿ ನಂ.1 ಕುಸ್ತಿಪಟು ಆಗುವ ಗುರಿ ಹೊಂದಿರುವ ಗೀತಾ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಟ್ಯುನಿಶಿಯದ ಮಾರ್ವಾ ಅಮ್ರಿ ಹಾಗೂ ಭಾರತದ ಸಾಕ್ಷಿ ಮಲಿಕ್‌ರನ್ನು ಮಣಿಸುವ ಯೋಚನೆಯಲ್ಲಿದ್ದಾರೆ







