ಹೈದರಾಬಾದ್ ವಿರುದ್ಧ ಮುಂಬೈಗೆ ಮುನ್ನಡೆ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್

ರಾಯ್‌ಪುರ, ಡಿ.25: ಹಾಲಿ ಚಾಂಪಿಯನ್ ಮುಂಬೈ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಹೈದರಾಬಾದ್‌ಗೆ ತಿರುಗೇಟು ನೀಡಿ ಮುನ್ನಡೆ ಸಾಧಿಸಿದೆ.
ನಾಯಕ ಆದಿತ್ಯ ತಾರೆ ಹಾಗೂ ಪ್ರಫುಲ್ ವೇಲಾ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 50 ರನ್ ನೆರವಿನಿಂದ ರಣಜಿ ಟ್ರೋಫಿಯ ಮೂರನೆ ದಿನದಾಟದಂತ್ಯಕ್ಕೆ ಮುಂಬೈ 160 ರನ್ ಮುನ್ನಡೆಯಲ್ಲಿದೆ.
3ನೆ ದಿನವಾದ ರವಿವಾರ 3 ವಿಕೆಟ್‌ಗಳ ನಷ್ಟಕ್ಕೆ 167 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೈದರಾಬಾದ್ ಒಂದು ಹಂತದಲ್ಲಿ 5 ವಿಕೆಟ್‌ಗೆ 255 ರನ್ ಗಳಿಸಿ ಮೊದಲ ಇನಿಂಗ್ಸ್ ಮುನ್ನಡೆಯ ವಿಶ್ವಾಸದಲ್ಲಿತ್ತು. ಆಗ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಮುಂಬೈ ಬೌಲರ್‌ಗಳು ಹೈದರಾಬಾದ್‌ನ ಕೊನೆಯ 5 ವಿಕೆಟ್‌ಗಳನ್ನು 25 ರನ್‌ಗೆ ಉರುಳಿಸಿ 280 ರನ್‌ಗೆ ಆಲೌಟ್ ಮಾಡಿದರು. ಮುಂಬೈಗೆ 14 ರನ್ ಮುನ್ನಡೆ ಒದಗಿಸಿಕೊಟ್ಟರು.
ಹೈದರಾಬಾದ್‌ನ ಪರ ಆರಂಭಿಕ ಆಟಗಾರ ಅಗರವಾಲ್(82), ನಾಯಕ ಬದ್ರಿನಾಥ್(56) ಮಹತ್ವದ ಕಾಣಿಕೆ ನೀಡಿದರು. ಅಭಿಷೇಕ್ ನಾಯರ್(4-60)ಹಾಗೂ ಗೊಹಿಲ್(3-59) ಏಳು ವಿಕೆಟ್‌ಗಳನ್ನು ಹಂಚಿಕೊಂಡರು.
ಎರಡನೆ ಇನಿಂಗ್ಸ್ ಆರಂಭಿಸಿರುವ ಮುಂಬೈ 3 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದ್ದು, ತಾರೆ(ಅಜೇಯ 39) ಹಾಗೂ ಆರಂಭಿಕ ಆಟಗಾರ ವೇಲಾ(ಅಜೇಯ 27) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಮುಂಬೈ 293(ಸಿದ್ದೇಶ್ ಲಾಡ್ 110, ಮಿಲಿಂದ್ 5-80) ಹಾಗೂ 102/3(ತಾರೆ ಅಜೇಯ 39, ಮುಹಮ್ಮದ ಸಿರಾಜ್ 2-36)
ಹೈದರಾಬಾದ್: 280(ತನ್ಮಯ್ ಅಗರವಾಲ್ 82, ಅಭಿಷೇಕ್ ನಾಯರ್ 4-60)
ಒಡಿಶಾ ವಿರುದ್ದ ಗುಜರಾತ್ ಮೇಲುಗೈ ಜೈಪುರ, ಡಿ.25: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನ ಮೂರನೆ ದಿನದಾಟದಂತ್ಯಕ್ಕೆ 310 ರನ್ ಮುನ್ನಡೆ ಪಡೆದಿರುವ ಗುಜರಾತ್ ತಂಡ ಒಡಿಶಾ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಪಾರ್ಥಿವ್ ಪಟೇಲ್ ನೇತೃತ್ವದ ಗುಜರಾತ್ ತಂಡ ಒಡಿಶಾವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 199 ರನ್‌ಗೆ ಆಲೌಟ್ ಮಾಡಿ 64 ರನ್ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಗುಜರಾತ್‌ನ ಪರ ಜಸ್‌ಪ್ರೀತ್ ಬುಮ್ರಾ(5-41) ಸ್ಟಾರ್ ಬೌಲರ್ ಆಗಿ ಹೊರ ಹೊಮ್ಮಿದರು.
ಮೊದಲ ಇನಿಂಗ್ಸ್‌ನ ಮುನ್ನಡೆಯೊಂದಿಗೆ 2ನೆ ಇನಿಂಗ್ಸ್ ಆರಂಭಿಸಿರುವ ಗುಜರಾತ್‌ಗೆ ಆರಂಭಿಕ ಆಟಗಾರರಾದ ಪ್ರಿಯಾಂಕ್ ಪಾಂಚಾಲ್(81) ಹಾಗೂ ಸಮಿತ್ ಗೊಹೆಲ್(ಅಜೇಯ 110) ಮೊದಲ ವಿಕೆಟ್‌ಗೆ 149 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ನೀಡಿದ್ದಾರೆ.
ಪ್ರಿಯಾಂಕ್ 19 ರನ್‌ನಿಂದ ಸತತ 4ನೆ ಶತಕದಿಂದ ವಂಚಿತರಾದರು. ಮತ್ತೊಂದೆಡೆ ಗೊಹೆಲ್ ಈ ಋತುವಿನಲ್ಲಿ ಮೊದಲ ಶತಕ ಬಾರಿಸಲು ಯಶಸ್ವಿಯಾದರು. ದಿನದಾಟದಂತ್ಯಕ್ಕೆ ಗುಜರಾತ್ 3 ವಿಕೆಟ್‌ಗಳ ನಷ್ಟಕ್ಕೆ 246 ರನ್ ಗಳಿಸಿದೆ. ಒಟ್ಟು 310 ರನ್ ಲೀಡ್‌ನಲ್ಲಿದೆ. ಇನ್ನು 2 ದಿನಗಳ ಆಟ ಬಾಕಿಯಿದ್ದು, ಗುಜರಾತ್ ಗೆಲುವಿನ ವಿಶ್ವಾಸದಲ್ಲಿದೆ.
ಸಂಕ್ಷಿಪ್ತ ಸ್ಕೋರ್
ಗುಜರಾತ್ 263(ಚಿರಾಗ್ ಗಾಂಧಿ 81, ರುಶ್ ಕಲರಿಯ 73, ಬಸಂತ್ ಮೊಹಾಂತಿ 5-68), 246/3(ಸಮಿತ್ ಗೊಯೆಲ್ ಅಜೇಯ 110, ಪ್ರಿಯಾಂಕ್ ಪಾಂಚಾಲ್ 81)
ಒಡಿಶಾ: 199(ಸೂರ್ಯಕಾಂತ್ 47, ಜಸ್‌ಪ್ರೀತ್ ಬುಮ್ರಾ 5-41)
ನದೀಮ್‌ಗೆ ಏಳು ವಿಕೆಟ್, ಜಾರ್ಖಂಡ್-ಹರ್ಯಾಣ ಸಮಬಲ ಹೋರಾಟ
ಬರೋಡಾ, ಡಿ.25: ವಿರಾಟ್ ಸಿಂಗ್ ಹಾಗೂ ನದೀಮ್ ಏಳನೆ ವಿಕೆಟ್‌ಗೆ ಸೇರಿಸಿದ ಅರ್ಧಶತಕದ ಜೊತೆಯಾಟ ನೆರವಿನಿಂದ ಜಾರ್ಖಂಡ್ ತಂಡ ಹರ್ಯಾಣದ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
3 ವಿಕೆಟ್ ನಷ್ಟಕ್ಕೆ 228 ರನ್‌ನಿಂದ ದಿನದಾಟವನ್ನು ಆರಂಭಿಸಿದ ಜಾರ್ಖಂಡ್ ಆರಂಭದಲ್ಲಿ 3 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆಗ ವಿರಾಟ್ ಹಾಗೂ ನದೀಮ್ ತಂಡಕ್ಕೆ ಆಸರೆಯಾದರು. 19ರ ಹರೆಯದ ಎಡಗೈ ದಾಂಡಿಗ ವಿರಾಟ್ ಆಕರ್ಷಕ ಶತಕ ಬಾರಿಸಿ ಜಾರ್ಖಂಡ್ ಮೊದಲ ಇನಿಂಗ್ಸ್‌ನಲ್ಲಿ 345 ರನ್ ಗಳಿಸಿ 87 ರನ್ ಮುನ್ನಡೆ ಪಡೆಯಲು ನೆರವಾದರು.
ಹರ್ಯಾಣದ ಪರ ಹರ್ಷಲ್ ಪಟೇಲ್(4-46) ಹಾಗೂ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್(3-85) ಏಳು ವಿಕೆಟ್ ಹಂಚಿಕೊಂಡರು.
ಹರ್ಯಾಣ 146/2: ಎರಡನೆ ಇನಿಂಗ್ಸ್ ಆರಂಭಿಸಿರುವ ಹರ್ಯಾಣ ತಂಡ 3ನೆ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ನಿತಿನ್ ಸೈನಿ ಹಾಗೂ ಶುಭಂ ರೊಹಿಲಾ ಮೊದಲ ವಿಕೆಟ್‌ಗೆ 79 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಸೈನಿ ಹಾಗೂ ರೊಹಿಲಾ ಬೆನ್ನು ಬೆನ್ನಿಗೆ ಔಟಾದರೂ ದೃತಿಗೆಡದ ಹರ್ಯಾಣಕ್ಕೆ ಶಿವಂ ಚೌಹಾಣ್ ಹಾಗೂ ಚೈತನ್ಯ ಆಸರೆಯಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಹರ್ಯಾಣ 258(ರಜತ್ 42, ಚೈತನ್ಯ 41, ನದೀಮ್ 7-79) 146/2(ಶುಭಂ 43, ನಿತಿನ್ 41, ಸಮರ್ ಖಾದ್ರಿ 2-48)
ಜಾರ್ಖಂಡ್ 345(ವಿರಾಟ್ ಸಿಂಗ್ 107, ಇಶಾಂಕ್ ಜಗ್ಗಿ 77, ಹರ್ಷಲ್ ಪಟೇಲ್ 4-46, ಚಾಹಲ್ 3-85).







