ಅಭಿಮಾನಿಗಳ ಪ್ರೀತಿಯೇ ನನಗೆ ಶ್ರೀರಕ್ಷೆ : ಅಫ್ರಿದಿ

ಕರಾಚಿ, ಡಿ.25: ‘‘ನಾನು ಪಾಕಿಸ್ತಾನದ ಪರ 20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ. ವಿದಾಯದ ಪಂದ್ಯಕ್ಕಾಗಿ ನಾನು ಯಾರನ್ನೂ ಅವಲಂಬಿಸಿಲ್ಲ. ಬೇಡಿಕೆಯನ್ನು ಸಲ್ಲಿಸಿಲ್ಲ. ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲವೇ ನನಗೆ ಲಭಿಸಿರುವ ಶ್ರೀರಕ್ಷೆಯಾಗಿದೆ’’ ಎಂದು ಪಾಕಿಸ್ತಾನದ ಹಿರಿಯ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ತನಗಾಗಿ ವಿದಾಯದ ಪಂದ್ಯ ಆಯೋಜಿಸುವಂತೆ ಪಿಸಿಬಿ ಬಳಿ ನಾನು ವಿನಂತಿಸಿಲ್ಲ ಎಂದು ಸ್ಪಷ್ಟಪಡಿಸಿದ ಅಫ್ರಿದಿ,‘‘ನಾನು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ತನಕ ಕ್ರಿಕೆಟ್ ಆಡುವುದನ್ನು ಮುಂದುವರಿಸುವೆ. ನನ್ನ ವೃತ್ತಿಜೀವನ ಇನ್ನೂ ಕೊನೆಗೊಂಡಿಲ್ಲ. ಉನ್ನತ ಮಟ್ಟದಲ್ಲಿ ಆಡುವುದನ್ನು ಮುಂದುವರಿಸುವೆ. ನನ್ನನ್ನು ಪಾಕ್ ತಂಡಕ್ಕೆ ಆಯ್ಕೆ ಮಾಡುವುದು ಪಾಕ್ ಆಯ್ಕೆ ಸಮಿತಿಗೆ ಬಿಟ್ಟ ವಿಚಾರ’’ ಎಂದು ಹೇಳಿದ್ದಾರೆ.
‘‘ಅಫ್ರಿದಿಯೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಾಕಿಸ್ತಾನ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರವಿದೆ. ಸಮಯ ಬಂದಾಗ ಅಫ್ರಿದಿಗೆ ಕ್ರಿಕೆಟ್ ಮಂಡಳಿಯು ವಿದಾಯದ ಪಂದ್ಯ ಆಯೋಜಿಸಲಿದೆ’’ ಎಂದು ಸಂದರ್ಶನವೊಂದರಲ್ಲಿ ಪಿಸಿಬಿಯ ಹಿರಿಯ ಅಧಿಕಾರಿ ನಜಮ್ ಸೇಥಿ ತಿಳಿಸಿದ್ದರು.
ತಾನು ವಿದಾಯದ ಪಂದ್ಯ ಆಡಲು ಬಯಸಿದ್ದೇನೆ ಎಂದು ಈ ಹಿಂದೆ ಹೇಳಿಕೆ ನೀಡಿರುವ ಅಫ್ರಿದಿ ಇದೀಗ ತನ್ನ ನಿಲುವನ್ನು ಬದಲಿಸಿದ್ದಾರೆ.





