ರೂ. 51 ಲಕ್ಷ ಮೊತ್ತದ ಹೊಸ ನೋಟು ವಶ
ಕಣ್ಣೂರು(ಕೇರಳ), ಡಿ.25: ಬೆಂಗಳೂರಿನಿಂದ ಬರುತ್ತಿದ್ದ ಬಸ್ಸೊಂದರ ಇಬ್ಬರು ಪ್ರಯಾಣಿಕರಿಂದ ಕೇರಳದ ಅಬಕಾರಿ ಅಧಿಕಾರಿಗಳಿಂದು ಇರಿಟ್ಟಿಯ ಬಳಿ ಬಹುತೇಕ ರೂ.2 ಸಾವಿರ ಮುಖಬೆಲೆಯ ನೋಟುಗಳಲ್ಲಿದ್ದ ರೂ.51.86 ಲಕ್ಷ ಲೆಕ್ಕ ನೀಡದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ರಂಜಿತ್ ಸಾಲಂಗಿ(24) ಹಾಗೂ ರಾಹುಲ್ ಆಧಿಕ್ ಅಲಿಯಾಸ್ ರಾಹುಲ್ ಘಾಟೂ(22) ಎಂಬವರ ಬಳಿಕ, ರೂ.51.80 ಲಕ್ಷ ಮೊತ್ತದ ರೂ.2 ಸಾವಿರ ಮುಖಬೆಲೆಯ ನೋಟುಗಳು ಹಾಗೂ ರೂ.6,300 ಮೊತ್ತದ ರೂ.100 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಮಹಾರಾಷ್ಟ್ರದವರಾದ ಈ ಯುವಕರು ಯಾವುದೇ ದಾಖಲೆಯಿಲ್ಲದೆ ಹಣ ಒಯ್ಯುತ್ತಿರುವುದು ಪತ್ತೆಯಾಯಿತು. ಆ ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು.
ಖಚಿತ ಮಾಹಿತಿಯ ಮೇಲೆ ವಿಶೇಷ ಅಬಕಾರಿ ದಳವೊಂದು ನಸುಕಿನ 3:30ರ ಸುಮಾರಿಗೆ ಪಯ್ಯನ್ನೂರಿಗೆ ಹೋಗುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ತಡೆದು ಈ ಹಣವನ್ನು ವಶಪಡಿಸಿಕೊಂಡಿದೆಯೆಂದು ಅಬಕಾರಿ ಅಧಿಕಾರಿಗಳಿಂದು ತಿಳಿಸಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.





