ಒಲಿಂಪಿಕ್ಸ್‌ನಲ್ಲಿ ಭಾರತದ ಬೆಳ್ಳಿ ಗೆರೆ ಮೂಡಿಸಿದ ಸಿಂಧು
2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಅನನ್ಯ ಸಾಧನೆ

ಹೊಸದಿಲ್ಲಿ, ಡಿ.25: ಯುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವುದು ಒಲಿಂಪಿಕ್ಸ್‌ನಲ್ಲಿ ಭಾರತದ ಪರ ದೊಡ್ಡ ಸಾಧನೆ. ಆದರೆ ಖ್ಯಾತ ತಾರೆ ಸೈನಾ ನೆಹ್ವಾಲ್ ಗಾಯದ ಕಾರಣದಿಂದಾಗಿ 2016ರ ಸಾಲಿನಲ್ಲಿ ದೊಡ್ಡ ಸಾಧನೆ ಮಾಡಲಿಲ್ಲ. ಸಿಂಧುಗೆ ಸಾಧನೆಯ ಈ ವರ್ಷ ವೃತ್ತಿಬದುಕಿನ ಪರ್ವಕಾಲವಾಗಿತ್ತು. ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲದಿದ್ದರೂ, ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಇದು ಸಿಂಧು ಸಾಧನೆಯ ಜೊತೆಗೆ ಅವರ ಕೋಚ್ ಪಿ.ಗೋಪಿಚಂದ್ ಸಾಧನೆಯೂ ಆಗಿದೆ. ಯಾಕೆಂದರೆ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಜಯಿಸಿದ ಇಬ್ಬರು ಆಟಗಾರ್ತಿಯರನ್ನು ರೂಪಿಸಿದ ಯಶಸ್ಸು ಅವರಿಗೆ ಸಲ್ಲುತ್ತದೆ.
ಸೈನಾ ನೆಹ್ವಾಲ್ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದರೂ, ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಹೊಂದಿದ್ದರು. ಆದರೆ ಅವರ ಮೂಲಕ ರಿಯೋ ಒಲಿಂಪಿಕ್ಸ್‌ನಲಲಿ ಪದಕ ಸಿಗಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ಕಂಚು ಜಯಿಸಿದ್ದರು. ಆಸ್ಟ್ರೇಲಿಯನ್ ಸೂಪರ್ ಸಿರೀಸ್‌ನಲ್ಲಿ ಅವರು ಚಾಂಪಿಯನ್ ಆಗಿರುವುದು ಅವರ ಪ್ರಸಕ್ತ ಸಾಲಿನ ಸಾಧನೆಯಾಗಿದೆ.
ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿದ್ದರೂ, ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ.ಸೈನಾ ಸಾಧನೆಯ ಮುಂದೆ ಸಿಂಧು ಸಾಧನೆ ಮಸುಕಾಗಿತ್ತು. ಒಲಿಂಪಿಕ್ಸ್ ನಲ್ಲಿ ಬೇಗನೆ ಸೋತು ನಿರ್ಗಮಿಸುತ್ತಾರೆಂದು ಹಲವರು ಭಾವಿಸಿದ್ದರು.
ಸಿಂಧು ಒಲಿಂಪಿಕ್ಸ್‌ನಲ್ಲಿ ಸದ್ದಿಲ್ಲದೆ ಸಾಧನೆ ಮಾಡಿದರು. ಸೈನಾ ಎರಡನೆ ಸುತ್ತಿನಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಅಂತ್ಯಗೊಳಿಸಿದರು.ಸೈನಾ ನಿರ್ಗಮಿಸುತ್ತಿದ್ದಂತೆ ಸಿಂಧು ಮಿಂಚಿದರು. ಸೈನಾರನ್ನು ಹಿಂದಕ್ಕೆ ತಳ್ಳಿ ಒಲಿಂಪಿಕ್ಸ್‌ನಲ್ಲಿ ಭಾರತದ ಇತಿಹಾಸ ನಿರ್ಮಿಸಿದರು. ಒಲಿಂಪಿಕ್ಸ್ ಮುಗಿದ ಬಳಿಕ ಸಿಂಧು ಚೀನಾ ಒಪನ್ ಸೂಪರ್ ಸಿರೀಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿ ಈ ಸಾಧನೆ ಮಾಡಿದ ಭಾರತದ ಮೂರನೆ ಬ್ಯಾಡ್ಮಿಂಟನ್ ಸಾಧಕಿ ಎನಿಸಿಕೊಂಡರು.ದುಬೈನಲ್ಲಿ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್ ಮತ್ತು ಹಾಂಕಾಂಗ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.
‘‘ ನನ್ನ ಪಾಲಿಗೆ 2016 ಅಭೂತಪೂರ್ವ ವರ್ಷವಾಗಿತ್ತು. ಯಾಕೆಂದರೆ ಒಲಿಂಪಿಕ್ಸ್ ಬೆಳ್ಳಿ ಜಯಿಸಿರುವುದು ನನ್ನ ವೃತ್ತಿಬದುಕಿನ ಶ್ರೇಷ್ಠ ಸಾಧನೆ.ಸೂಪರ್ ಸೀರಿಸ್‌ನಲ್ಲಿ ಚಾಂಪಿಯನ್ ಕನಸು ಕಂಡಿದ್ದೆ. ಚೀನಾ ಒಪನ್ ಮೂಲಕ ಸೂಪರ್ ಸಿರೀಸ್ ಚಾಂಪಿಯನ್ ಕನಸು ಸಾಕಾರಗೊಂಡಿತು’’ ಎಂದು ಸಿಂಧು ಹೇಳಿದ್ದಾರೆ.
‘‘ ನನಗೆ ನಂ.1 ಎನಿಸಿಕೊಳ್ಳುವುದು ಗುರಿಯಾಗಿದೆ. ಈ ವರ್ಷ ನಂ.6 ಸ್ಥಾನ ಸಿಕ್ಕಿತು. ಮುಂದಿನ ವರ್ಷ ಅಗ್ರಸ್ಥಾನಕ್ಕೇರುವ ಪ್ರಯತ್ನ ಯಶಸ್ವಿಯಾಗಬಹುದು ’’ ಎಂದು ಅವರು ಹೇಳಿದ್ಧಾರೆ.
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಕೆ. ಶ್ರೀಕಾಂತ್ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಎಚ್.ಎಸ್.ಪ್ರಣಯ್ ಸ್ವಿಸ್ ಓಪನ್ ಗ್ರಾನ್ ಪ್ರಿ ಗೋಲ್ಡ್‌ಜಯಿಸಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಸೌರಭ್ ವರ್ಮ ಗಾಯದಿಂದ ಚೇತರಿಸಿಕೊಂಡು ಚೀನಾ ತೈಪೆ ಓಪನ್ ಗ್ರಾನ್ ಪ್ರಿಯಲ್ಲಿ ಎರಡನೆ ಸ್ಥಾನ ಪಡೆದರು. ಬಿ. ಸಾಯಿ ಪ್ರಣೀತ್ ಕೆನಡಾ ಗ್ರಾನ್ ಪ್ರಿಯಲ್ಲಿ ಪ್ರಶಸ್ತಿ ಜಯಿಸಿದರು. ಸಮೀರ್ ವರ್ಮ ಸೀನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿ ಬಾಚಿಕೊಂಡರು. ಹಾಂಕಾಂಗ್ ಓಪನ್‌ನಲ್ಲಿ ಎರಡನೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಜಯ್ ಜಯರಾಂ ಡಚ್ ಓಪನ್ ಗ್ರಾನ್ ಪ್ರಿಯಲ್ಲಿ ಎರಡನೆ ಸ್ಥಾನ ಪಡೆದರು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಕೆನಡಾ ಓಪನ್‌ನಲ್ಲಿ ಜಯಿಸಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಆಟಗಾರರೆನಿಸಿಕೊಂಡಿದ್ದರು.
ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಪಾಲಿಗೆ 2016 ಸ್ಮರಣೀಯ ವರ್ಷ. ಬ್ರೆಝಿಲ್ ಮತ್ತು ರಶ್ಯ ಓಪನ್‌ನಲ್ಲಿ ಎರಡು ಗ್ರಾನ್ ಪ್ರಿ ಪ್ರಶಸ್ತಿ ಗೆದ್ದುಕೊಂಡರು. ಸ್ಕಾಟ್ಲೆಂಡ್ ಓಪನ್‌ನಲ್ಲಿ ಎರಡನೆ ಸ್ಥಾನ ಪಡೆದರು.
ರುತ್ವಿಕ ಸಿವಾನಿ ಗಾಡ್ಡೆ ರಶ್ಯದಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದರು. ಕುನ್‌ಶಾನ್‌ನಲ್ಲಿ ನಡೆದ ಉಬೆರ್ ಕಪ್ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ಸೋತು ಎರಡು ಕಂಚು ತನ್ನದಾಗಿಸಿಕೊಂಡಿದ್ದರು.
ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಒಲಿಂಪಿಕ್ಸ್‌ನಲ್ಲಿ ಸತತ ಎರಡನೆ ಬಾರಿ ಪ್ರವೇಶ ಗಿಟ್ಟಿಸಿಕೊಂಡಿದ್ದರು.ಆದರೆ ನವೆಂಬರ್ ತಿಂಗಳ ಆರಂಭದಲ್ಲಿ ಅವರು ಡಬಲ್ಸ್‌ನಿಂದ ಪರಸ್ಪರ ದೂರವಾದರು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಮತ್ತು ಗ್ಲಾಸ್ಗೋದಲ್ಲಿ ಕಂಚು ಪಡೆದ ಆರ್‌ಎಂವಿ ಗುರುಸಾಯಿದತ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬರಲು ವರ್ಷಪೂರ್ತಿ ಹೋರಾಟ ನಡೆಸಿದರು.
ಶ್ರೀಕಾಂತ್ ಜಪಾನ್ ಓಪನ್‌ನಲ್ಲಿ ವೇಳೆ ಗಾಯಗೊಂಡರು. ಬಳಿಕ ಅವರು ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗಲ್ಲಿ ಭಾಗವಹಿಸಲಿಲ್ಲ. ಪ್ರಣಯ್ ಬೆನ್ನು ನೋವಿನಿಂದ ಚೇತರಿಸಿಕೊಂಡರೂ, ಮಕಾವು ಓಪನ್ ವೇಳೆ ಮತ್ತೆ ಗಾಯಗೊಂಡರು.
‘‘ ಬ್ಯಾಡ್ಮಿಂಟನ್ ಆಟಗಾರರಿಗೆ 2016 ಸವಾಲಿನದ್ದಾಗಿತ್ತು. ಹಲವು ಮಂದಿ ಹಲವು ಟೂರ್ನಮೆಂಟ್‌ಗಳಲ್ಲಿ ಆಡಿದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರಯತ್ನ ನಡೆಸಿದರು. ಕೆಲವು ಮಂದಿ ಆಟಗಾರರಿಗೆ ಫಿಟ್‌ನೆಸ್ ಸಮಸ್ಯೆಅವರ ಸಾಧನೆ ಗೆ ಅಡ್ಡಿಯಾಗಿತ್ತು. ’’ ಗೋಪಿಚಂದ್, ನ್ಯಾಶನಲ್ ಬ್ಯಾಡ್ಮಿಂಟನ್ ಕೋಚ್.
,,,,,,,,,,,,,







