ನ್ಯಾಯವಾದಿಗೆ ಹಲ್ಲೆ ಪ್ರಕರಣ
ಪೇದೆಗಳ ವಿರುದ್ಧ ಕೇಸ್‌ದಾಖಲಿಸಲು ಕೋರ್ಟ್ ಆದೇಶ
ಸಾಗರ, ಡಿ.26: ಇಲ್ಲಿನ ನ್ಯಾಯವಾದಿ ರಾಜೇಶ್ ಎಸ್.ಬಿ. ಅವರಿಗೆ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಎಂಎಫ್‌ಸಿ ನ್ಯಾಯಾಲಯವು ಇಬ್ಬರು ಪೇದೆಗಳ ಮೇಲೆ ಪ್ರಕರಣ ದಾಖಲಿಸಲು ಆದೇಶ ನೀಡಿದೆ. ದಿ.10-08-2014ರಂದು ನ್ಯಾಯವಾದಿ ರಾಜೇಶ್ ಎಸ್.ಬಿ. ಎಂಬವರು ತಮ್ಮ ಕಕ್ಷಿದಾರರ ಜೊತೆ ಪೇಟೆ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮಹಿಳಾ ಪೇದೆ ಲೀಲಾವತಿ ಹಾಗೂ ಪೇದೆ ರತ್ನಾಕರ್ ಎಂಬವರು ವಿನಾಕಾರಣ ರಾಜೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದರು.
ಘಟನೆಗೆ ಸಂಬಂಧಪಟ್ಟಂತೆ ಕಳೆದ ಡಿ.14ರಂದು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು.ರಾಜೇಶ್ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಐಪಿಸಿ 166, 341, 349, 351,352,504,506 ಕಲಂನಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಡಿ. ಪ್ರಕಾಶ್, ಆರೊಪಿಗಳ ವಿರುದ್ಧ ಸೆಕ್ಷನ್ 504ರ ಅಡಿ ಪ್ರಕರಣ ದಾಖಲಿಸಲು ಆದೇಶ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಲೀಲಾವತಿ ಹಾಗೂ ರತ್ನಾಕರ್ ಅವರು ಜಾಮೀನು ಪಡೆದಿದ್ದಾರೆ. ಎಸ್.ಬಿ.ರಾಜೇಶ್ ಪರವಾಗಿ ಆರ್.ಎಂ.ಷಣ್ಮುಖ ವಾದ ಮಂಡಿಸಿದ್ದರು.







