ಮೊದಲ ಏಕದಿನ: ಲಥಾಮ್ ಶತಕ, ಬಾಂಗ್ಲಾ ಕಿವಿ ಹಿಂಡಿದ ಕಿವೀಸ್

ಕ್ರೈಸ್ಟ್‌ಚರ್ಚ್, ಡಿ.26: ಬಾಕ್ಸಿಂಗ್ ಡೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭರ್ಜರಿ ಅಂತರದಿಂದ ಸೋಲಿಸಿದ ನ್ಯೂಝಿಲೆಂಡ್ ತಂಡ ಶುಭಾರಂಭ ಮಾಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡ ಟಾಮ್ ಲಥಾಮ್ ಶತಕ(137 ರನ್, 121 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಕಾಲಿನ್ ಮುನ್ರೊ(87 ರನ್, 61 ಎಸೆತ, 8 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 341 ರನ್ ಗಳಿಸಿತು. ಲಥಾಮ್-ಮುನ್ರೊ ಜೋಡಿ 5ನೆ ವಿಕೆಟ್‌ಗೆ 158 ರನ್ ಸೇರಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ಗೆಲ್ಲಲು 342 ರನ್ ಗುರಿ ಪಡೆದ ಬಾಂಗ್ಲಾದೇಶ ತಂಡ ಪ್ರತಿ ಹೋರಾಟ ನೀಡಲು ಯತ್ನಿಸಿದರೂ 44.5 ಓವರ್‌ಗಳಲ್ಲಿ 264 ರನ್‌ಗೆ ಆಲೌಟಾಯಿತು. 77 ರನ್‌ಗಳ ಅಂತರದಿಂದ ಸೋಲುಂಡಿತು. ಬಾಂಗ್ಲಾದ ಪರ ಶಾಕೀಬ್ ಅಲ್ ಹಸನ್(59) ಹಾಗೂ ಎಂ. ಹುಸೈನ್ (ಅಜೇಯ 50) ಅರ್ಧಶತಕ ಬಾರಿಸಿದ್ದರು. ಆದರೆ, ತಲಾ 3 ವಿಕೆಟ್‌ಗಳನ್ನು ಪಡೆದ ಜೇಮ್ಸ್ ನೀಶಮ್(3-36) ಹಾಗೂ ಫರ್ಗ್ಯುಸನ್(3-54) ಬಾಂಗ್ಲಾವನ್ನು 264 ರನ್‌ಗೆ ನಿಯಂತ್ರಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 341/7(ಲಥಾಮ್ 137, ಕಾಲಿನ್ ಮುನ್ರೊ 87, ಶಾಕಿಬ್ ಅಲ್ ಹಸನ್ 3-69)
ಬಾಂಗ್ಲಾದೇಶ: 44.5 ಓವರ್‌ಗಳಲ್ಲಿ 264 ರನ್‌ಗೆ ಆಲೌಟ್
(ಹಸನ್ 59, ಎಂ.ಹುಸೈನ್ ಅಜೇಯ 50, ನೀಶಮ್ 3-36, ಫರ್ಗ್ಯುಸನ್ 3-54)







