ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅಡುಗೆ ಅನಿಲ ವಿತರಣೆ

ಮುಲ್ಕಿ, ಡಿ.25: ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಅರಿತು ಸರಕರ ಸ್ಪಂದಿಸುತ್ತಿದ್ದು, ಗ್ರಾಮ ಪಂಚಾಯತ್ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸರಕಾರದ ಸವಲತ್ತುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅಡುಗೆ ಅನಿಲ ವಿತರಣೆ ಮತ್ತು ಅಂಗವಿಕಲರಿಗೆ ಸಹಾಯಧನ ವಿತರಿಸಿ ಮಾತನಾಡಿದರು.
ಮುಲ್ಕಿ ಮೂಡಬಿರೆ ಕ್ಷೇತ್ರದ ಹೆಚ್ಚಿನ ಗ್ರಾಮೀಣ ರಸ್ತೆಗಳು ವಿವಿಧ ಸರಕಾರಿ ಯೋಜನೆಗಳಡಿ ಸುಸ್ಥಿತಿಯನ್ನು ಕಂಡುಕೊಂಡಿದ್ದು ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬಹುಗ್ರಾಮ ನೀರಿನ ಯೋಜನೆಗೆ ಕಿಂಡಿ ಆಣೆಕಟ್ಟುಗಳನ್ನು ಸರಿಪಡಿಸುವುದರೊಂದಿಗೆ ನೂತನ ಕಿಂಡಿ ಆಣೆಕಟ್ಟುಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬೃಹತ್ ಉಪ್ಪುನೀರು ತಡೆ ಆಣೆಕಟ್ಟು ಮಟ್ಟುವಿನಲ್ಲಿ ನಿರ್ಮಾಣಗೊಳ್ಳಲಿದೆ. ಜನಸಾಮಾನ್ಯರು ಸರಕಾರಿ ಯೋಜನೆಗಳ ಸಂಪೂರ್ಣ ಫಾಲಾನುಭವಿಗಳಾಗಿ ಯೋಜನೆಗಳ ಯಶಸ್ಸಿಗೆ ಸಹಕರಿಸಬೇಕು ಎಂದರು.
ಸಭೆಯ ಅಧ್ಯಕ್ಷತೆತಯನ್ನು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್ ವಹಿಸಿದ್ದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಹಿರಿಯರಾದ ರಾಮದಾಸ್ ಶೆಟ್ಟಿ, ವಿಷ್ಣುದಾಸ್ ಭಟ್, ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಸದಸ್ಯರಾದ ದಯಾನಂದ ಕೋಟ್ಯಾನ್, ಮನೋಹರ ಕೋಟ್ಯಾನ್, ಶಾರದಾ,ಕಲಾವತಿ, ಜೀವನ್ ಶೆಟ್ಟಿ, ಹರೀಶ್ ಶೆಟ್ಟಿ ಕಾರ್ಯದರ್ಶಿ ಯೋಗೀಶ್ ನಾನಿಲ್ ಮತ್ತಿತರರಿದ್ದರು.







