ಆರ್‌ಬಿಐಗೆ ಸ್ವತಂತ್ರ ಕಾರ್ಯನಿರ್ವಹಣೆ ಯಾಕೆ ಸಾಧ್ಯವಾಗುತ್ತಿಲ್ಲ ?

ಇದುವರೆಗೆ ಆರ್‌ಬಿಐ ಒಂದು ಸ್ವತಂತ್ರ ಬ್ಯಾಂಕ್ ಎನಿಸಿ ಕೊಂಡಿತ್ತು. ಆದರೆ ನೋಟು ಅಮಾನ್ಯ ವಿಷಯದಲ್ಲಿ ಆರ್‌ಬಿಐ ನಿರ್ವಹಿಸಿದ ಪಾತ್ರ ಅದರ ಪ್ರತಿಷ್ಠೆ ಮತ್ತು ಅಸ್ಮಿತೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಭಾರತ ಸರಕಾರದ ಬ್ಯಾಂಕ್, ಬ್ಯಾಂಕ್‌ಗಳ ಬ್ಯಾಂಕ್ ಎಂಬ ಹೆಗ್ಗಳಿಕೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗಿದೆ. ಕರೆನ್ಸಿ ನೋಟುಗಳ ಮುದ್ರಣ ಮತ್ತು ಚಲಾವಣೆಯನ್ನು ನಿಯಂತ್ರಿಸುವುದು ಮತ್ತು ಆರ್ಥಿಕ ಸ್ಥಿರತೆ ಖಾತ್ರಿಪಡಿಸಿಕೊಳ್ಳುವುದು ರಿಸರ್ವ್ ಬ್ಯಾಂಕ್‌ನ ಪ್ರಮುಖ ಮತ್ತು ವಿಶಿಷ್ಟ ಕಾರ್ಯವಾಗಿದೆ. ಕರೆನ್ಸಿ ನೋಟುಗಳನ್ನು ನಿಯಂತ್ರಿಸುವ ಅಧಿಕಾರ ಇರುವ ಕಾರಣ ಆರ್‌ಬಿಐ ಹೊಸ ನೋಟುಗಳ ಮುದ್ರಣ ಮತ್ತು ನೋಟುಗಳ ಮಾನ್ಯತೆ ವಿಷಯದ ಬಗ್ಗೆ ಅಂತಿಮ ಶಿಫಾರಸು ಮಾಡುವ ಪ್ರಾಧಿಕಾರವಾಗಿದೆ. ಇದುವರೆಗೆ ಆರ್‌ಬಿಐ ಒಂದು ಸ್ವತಂತ್ರ ಬ್ಯಾಂಕ್ ಎನಿಸಿ ಕೊಂಡಿತ್ತು. ಆದರೆ ನೋಟು ಅಮಾನ್ಯ ವಿಷಯದಲ್ಲಿ ಆರ್‌ಬಿಐ ನಿರ್ವಹಿಸಿದ ಪಾತ್ರ ಅದರ ಪ್ರತಿಷ್ಠೆ ಮತ್ತು ಅಸ್ಮಿತೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಆರ್‌ಬಿಐನ ಕೇಂದ್ರೀಯ ಮಂಡಳಿ ಸಮಗ್ರ ಆಡಳಿತದ ಹೊಣೆಗಾರಿಕೆ ನಿಭಾಯಿಸುತ್ತದೆ. ಆಡಳಿತ, ವ್ಯವಹಾರ ಮತ್ತು ಇತರ ಪ್ರಮುಖ ನಿರ್ಧಾರಗಳು, ಆರ್ಥಿಕ ಸ್ಥಿರತೆ, ಹಣದ ಪೂರೈಕೆ, ನೋಟುಗಳ ಅಮಾನ್ಯತೆ ಇವುಗಳ ಬಗ್ಗೆ ಮಂಡಳಿ ಉತ್ತರದಾಯಿತ್ವವನ್ನು ಹೊಂದಿರುತ್ತದೆ.ಆಡಳಿತ ಮಂಡಳಿಯ ಸದಸ್ಯರನ್ನು ನಿರ್ದೇಶಕರು ಎಂದು ಕರೆಯಲಾಗುತ್ತದೆ. ಗರಿಷ್ಠ 19 ನಿರ್ದೇಶಕರನ್ನು ಆಡಳಿತ ಮಂಡಳಿಗೆ ನೇಮಿಸಿ ಕೊಳ್ಳಲು ಆರ್‌ಬಿಐ ಕಾಯ್ದೆಯಲ್ಲಿ ಅವಕಾಶವಿದೆ. ಈ ನಿರ್ದೇಶಕರ ಸಂಯೋಜನೆ ಹೀಗಿರುತ್ತದೆ.
* ಆರ್‌ಬಿಐ ಗವರ್ನರ್ ಮತ್ತು ನಾಲ್ಕು ಉಪ ಗವರ್ನರ್‌ಗಳು.
*ಆರ್‌ಬಿಐನ ನಾಲ್ಕು ಸ್ಥಳೀಯ ಮಂಡಳಿಗಳಿಂದ ನಾಲ್ವರು ನಿರ್ದೇಶಕರು.
ಸರಕಾರದಿಂದ ನಾಮನಿರ್ದೇಶನಗೊಂಡ ಇಬ್ಬರು ನಿರ್ದೇಶಕರು.
*ಕೇಂದ್ರ ಸರಕಾರ ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಿರುವ 10 ನಿರ್ದೇಶಕರು.
ಸಮಾನತೆ ಮತ್ತು ವ್ಯವಹಾರದ ದೃಷ್ಠಿಯಿಂದ ಈ ನಿರ್ದೇಶಕರು ಎರಡು ಪ್ರವರ್ಗಕ್ಕೆ ಸೇರಿರುತ್ತಾರೆ. ಪ್ರಥಮ ಪ್ರವರ್ಗದಲ್ಲಿ ಆರ್‌ಬಿಐ, ಕೇಂದ್ರ ಸರಕಾರ ಮತ್ತು ಭಾರತದ ಬ್ಯಾಂಕ್‌ಗಳು ಸೇರಿದಂತೆ ನೇರ ಹೊಣೆಗಾರರು ಇರುತ್ತಾರೆ. ಒಂಬತ್ತು ನಿರ್ದೇಶಕರು ಈ ವರ್ಗದಲ್ಲಿರುತ್ತಾರೆ.
ಎರಡನೆ ವರ್ಗದಲ್ಲಿ ಸರಕಾರ ನಾಮನಿರ್ದೇಶನ ಮಾಡಿದ 10 ನಿರ್ದೇಶಕರು ಇರುತ್ತಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಸ್ಥಾಪಿತ ಹಿತಾಸಕ್ತಿ ಹೊಂದಿರದವರು ಮತ್ತು ತಜ್ಞರನ್ನು ನಿರ್ದೇಶಕರನ್ನಾಗಿ ನೇಮಿಸಲಾಗುತ್ತದೆ. ಈ ‘ಸ್ವತಂತ್ರ’ ನಿರ್ದೇಶಕರ ವೃತ್ತಿಯ ಅಥವಾ ಉದ್ಯಮದ ಅನುಭವ ಆಡಳಿತ ಮಂಡಳಿಗೆ ನೆರವಾಗುತ್ತದೆ ಮತ್ತು ಇವರು ಮಂಡಳಿಯ ಸದಾಚಾರದ ದಿಕ್ಸೂಚಿಗೆ ಮುನ್ನುಡಿ ಬರೆಯುತ್ತಾರೆ. 19 ಸದಸ್ಯರ ಆಡಳಿತ ಮಂಡಳಿಯ ಸ್ವರೂಪವು ಸ್ವಾತಂತ್ರದ ವಿಷಯವನ್ನು ಮತ್ತಷ್ಟು ಪುಷ್ಠೀಕರಿಸುತ್ತದೆ. ಇಲ್ಲಿ 9 ನೇರ ಹೊಣೆ ಗಾರ ನಿರ್ದೇಶಕರು ಮತ್ತು 10 ಸ್ವತಂತ್ರ ನಿರ್ದೇಶಕರು ಇದ್ದಾರೆ. ಟಾಟಾ ಸಮೂಹ ಸಂಸ್ಥೆಗಳಲ್ಲಿ ನಡೆಯುತ್ತಿರುವ ಇ್ತತೀಚಿನ ಬೆಳವಣಿಗೆಗಳು ಸ್ವತಂತ್ರ ನಿರ್ದೇಶಕರ ಪಾತ್ರ ಮತ್ತು ಮಹತ್ವದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತದೆ. ಯಾವುದೇ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರ ಸಂಯೋಜನೆ ಮಾಡುವಾಗ ವೈವಿಧ್ಯಮಯ ಕ್ಷೇತ್ರದ ಮತ್ತು ವಿವಿಧ ಸಮುದಾಯ, ಧರ್ಮದ ವ್ಯಕ್ತಿಗಳನ್ನು ಆರಿಸುವುದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಆರ್‌ಬಿಐಯ ಈಗಿನ ಕೇಂದ್ರ ಮಂಡಳಿಯ ಸ್ವರೂಪ ಹೇಗಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಕಳೆಕ ಕೆಲ ಸಮಯಗಳಿಂದ ಆರ್‌ಬಿಐ ಆಡಳಿತ ಮಂಡಳಿಯಲ್ಲಿ ಕೇವಲ 10 ನಿರ್ದೇಶಕರಿದ್ದಾರೆ. ಇವರಲ್ಲಿ ನಾಲ್ವರು ಆರ್‌ಬಿಐಗೆ ಸೇರಿದವರು (ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಆರ್. ಗಾಂಧಿ, ಎಸ್.ಎಸ್. ಮುಂಡ್ರಾ ಹಾಗೂ ಎನ್.ಎಸ್.ವಿಶ್ವನಾಥನ್ ಸೇರಿದಂತೆ ಮೂವರು ಉಪಗವರ್ನರ್‌ಗಳು). ಆರ್‌ಬಿಐನ ನಾಲ್ಕು ಸ್ಥಳೀಯ ಆಡಳಿತ ಮಂಡಳಿಯಿಂದ ಕೇವಲ ಒಬ್ಬ ನಿರ್ದೇಶಕ(ನಚಿಕೇತ್ ಮೋರ್), ಇಬ್ಬರು ಸರಕಾರಿ ಅಧಿಕಾರಿಗಳು (ಶಕ್ತಿಕಾಂತ ದಾಸ್ ಮತ್ತು ಅಂಜೂಲಿ ಚಿಬ್ ದುಗ್ಗಾಲ್-ಇಬ್ಬರೂ ವಿತ್ತ ಸಚಿವಾಲ ಯದ ಪ್ರತಿನಿಧಿಗಳು) ಮತ್ತು ಕೇವಲ ಮೂವರು ಸ್ವತಂತ್ರ ನಿರ್ದೇಶಕರು(ಟಿಸಿಎಸ್‌ನ ಚಂದ್ರಶೇಖರನ್, ಮಹೀಂದ್ರ ಸಂಸ್ಥೆಯ ಮಾಜಿ ಸಿಇಒ ಭರತ್ ನರೋತ್ತಮ್ ದೋಷಿ ಮತ್ತು ನಿವೃತ್ತ ಸರಕಾರಿ ಅಧಿಕಾರಿ ಸುಧೀರ್ ಮಂಕಡ್). ಒಟ್ಟಾರೆ ಹೇಳುವುದಾದರೆ ಏಳು ಆಂತರಿಕ ನಿರ್ದೇಶಕರು, ಏಳು ಸ್ವತಂತ್ರ ನಿರ್ದೇಶಕರನ್ನು ಆಡಳಿತ ಮಂಡಳಿ ಹೊಂದಿದೆ.
ಕಳೆದ 20 ವರ್ಷಗಳಲ್ಲಿ ಒಮ್ಮೆಯೂ ನಿರ್ದೇಶಕರ ಮಂಡಳಿಯ ಸಂಯೋಜನೆಯಲ್ಲಿ ಆಂತರಿಕ ನಿರ್ದೇ ಶಕರು ‘ಮೇಲುಗೈ’ ಹೊಂದಿದ ನಿದರ್ಶನವಿಲ್ಲ. ಅಲ್ಲದೆ ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್‌ಬಿಐ 16ಕ್ಕಿಂತ ಕಡಿಮೆ ನಿರ್ದೇಶಕರನ್ನು ಹೊಂದಿದೆ. 2015ರಲ್ಲಿ ಕೇಂದ್ರೀಯ ಮಂಡಳಿ 17 ನಿರ್ದೇಶಕ ರನ್ನು ಹೊಂದಿತ್ತು. ಅರ್‌ಬಿಐಯಿಂದ ಐವರು, ಸ್ಥಳೀಯ ಮಂಡಳಿಯಿಂದ ಮೂವರು, ಸರಕಾರದಿಂದ ಇಬ್ಬರು ಮತ್ತು 7 ಮಂದಿ ಸ್ವತಂತ್ರ ನಿರ್ದೇಶಕರು. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವೈ.ಎಚ್.ಮಲೇಗಂ, ಖ್ಯಾತ ಶಿಕ್ಷಣ ತಜ್ಞ ದೀಪಾಂಕರ್ ಗುಪ್ತ, ಉದ್ಯಮಿ ಜಿ.ಎಂ.ರಾವ್, ಸಹಕಾರಿ ಕ್ಷೇತ್ರದ ಮುಂದಾಳು ಮತ್ತು ಗಾಂಧೀವಾದಿ ಇಳಾ ಭಟ್ಟ್, ಆರ್ಥಿಕ ತಜ್ಞೆ ಇಂದಿರಾ ರಾಜಾರಾಮನ್, ಐಟಿಸಿ ಗ್ರೂಫ್‌ನ ಮುಖ್ಯಸ್ಥ ವೈ.ಸಿ.ದೇವೇಶ್ವರ್, ಐಐಟಿ ಖರಗ್‌ಪುರದ ನಿರ್ದೇಶಕ ದಾಮೋದರ್ ಆಚಾರ್ಯ ಮುಂತಾದವರು ಇವರಲ್ಲಿ ಸೇರಿದ್ದಾರೆ. ಸ್ಥಳೀಯ ಮಂಡಳಿ ಸದಸ್ಯರಲ್ಲಿ ಅನಿಲ್ ಕಾಕೋಡ್ಕರ್, ಕಾರ್ಣಿಕ್, ನಚಿಕೇತ್ ಮೋರ್ ಮುಂತಾದ ದಿಗ್ಗಜರು ಸೇರಿದ್ದು ಈ ಮೂಲಕ ಕೇಂದ್ರೀಯ ಮಂಡಳಿ ಹೆಸರಿಗೆ ತಕ್ಕಂತೆ ಸ್ವತಂತ್ರ ಸಂಸ್ಥೆಯಾಗಿರುವುದಕ್ಕೆ ಸಾಕ್ಷಿಯಾಗಿದ್ದರು. ಆದರೆ ಈಗ ಇರುವುದು 7 ಮಂದಿ ಆಂತರಿಕ ನಿರ್ದೇಶಕರು ಮತ್ತು ಕೇವಲ ಮೂವರು ಸ್ವತಂತ್ರ ನಿರ್ದೇಶಕರು. ಇದನ್ನು ಗಮನಿಸಿದಾಗ, ಆರ್‌ಬಿಐ ಕೇಂದ್ರ ಮಂಡಳಿಯ ಸ್ವಾತಂತ್ರದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಪ್ರಾದೇಶಿಕ ಮತ್ತು ಆರ್ಥಿಕ ಪ್ರತಿನಿಧಿಗಳಾಗಿ, ಸಹಕಾರಿ ಸಂಸ್ಥೆ ಅಥವಾ ಸ್ಥಳೀಯ ಬ್ಯಾಂಕ್‌ಗಳ ಹಿತಾಸಕ್ತಿಯ ಸಲುವಾಗಿ, ನಾಲ್ಕು ಸ್ಥಳೀಯ ಆಡಳಿತ ಮಂಡಳಿಗೆ ತಲಾ ಐವರು ನಿರ್ದೇಶಕರನ್ನು ಕೇಂದ್ರ ಸರಕಾರ ನೇಮಿಸಬೇಕು ಎಂದು ಆರ್‌ಬಿಐ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿಚಿತ್ರವೆಂದರೆ ಈ ಇಪ್ಪತ್ತು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಾತ್ರ ತುಂಬಲಾಗಿದೆ.
ಮಾನ್ಯವಾಗಿ ಓರ್ವ ನಿರ್ದೇಶಕರ ನಿವೃತ್ತಿ ಹೊಂದುವ ಸಾಕಷ್ಟು ಮುಂಚಿತವಾಗಿ, ಅವರ ಹುದ್ದೆಗೆ ಮತ್ತೊಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ.ಆದರೆ ಕೇಂದ್ರ ಸರಕಾರ ತೆರವಾದ ಸ್ಥಾನಗಳನ್ನು ಭರ್ತಿ ಮಾಡಲು ಯಾಕೆ ಮುಂದಾಗಿಲ್ಲ ? ‘‘ಉತ್ತಮ ವ್ಯಕ್ತಿಗಳ ಆತ್ಮಸಾಕ್ಷಿಯ ಧ್ವನಿಗಳನ್ನು ಹತ್ತಿಕ್ಕಲು, ನಿರಂಕುಶ ಪ್ರಭುತ್ವದ ಮೂಲಕ ಸ್ವತಂತ್ರ ಧ್ವನಿಗಳನ್ನು ಉಡುಗಿಸಿ, ಅದನ್ನು ವೌನ ಸಮ್ಮತಿ ಎಂದು ಅರ್ಥೈಸಲು ವೇದಿಕೆ ಕಲ್ಪಿಸಲಾಗು ತ್ತಿದೆ’’ ಎಂದು ಥೋಮಸ್ ಜೆಫರ್ಸನ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲೇ, ನೋಟು ಅಮಾನ್ಯದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನವೆಂಬರ್ 8ರಂದು ‘‘ಒಂದು ಪೆಡಂಭೂತವನ್ನು ಹೊರ ಬಿಡಲಾಗಿದೆ’’ ಎಂದು ಹೇಳಿಕೆ ನೀಡಿದ್ದರು. ಆರ್‌ಬಿಐಯ ಆಡಳಿತ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸಂಯೋಜನೆಗೊಳ್ಳದಿರಲು ನೌಕರಶಾಹಿಯ ವಿಳಂಬ ಧೋರಣೆ ಕಾರಣವೇ ಅಥವಾ ಇದರ ಹಿಂದೆ ಏನಾದರೂ ಹುನ್ನಾರವಿದೆಯೇ ಎಂಬುದರ ಬಗ್ಗೆ ಪ್ರಸ್ತುತ ನಿರ್ದೇಶಕರು ತಮ್ಮ ವೌನ ಮುರಿಯಲು ಇದು ಸುವರ್ಣ ಘಳಿಗೆಯಾಗಿದೆ.
ಕೃಪೆ-ದಿ ವೈರ್







