ಗುಜರಾತಿನ ಗಾಯಕಿಯರ ಮೇಲೆ 40 ಲ.ರೂ.ನೋಟುಗಳ ಸುರಿಮಳೆ
ಹೊಸದಿಲ್ಲಿ,ಡಿ.26: ನೋಟು ರದ್ದತಿಯ ಬಳಿಕ ಇಡೀ ರಾಷ್ಟ್ರವೇ ನಗದು ಹಣದ ಕೊರತೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೆ, ಅತ್ತ ದೇಶದ ಪ್ರಜೆಗಳಿಗೆ ‘ಕ್ಯಾಷ್‌ಲೆಸ್’ ಆಗುವಂತೆ ಹೋದಲ್ಲಿ ಬಂದಲ್ಲಿ ಕರೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ತವರುರಾಜ್ಯ ಗುಜರಾತಿನಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮವೊಂದರಲ್ಲಿ ರಸಿಕರು ಗುಜರಾತಿ ಜಾನಪದ ಗಾಯಕಿಯರ ಮೇಲೆ ಸುಮಾರು 40 ಲ.ರೂ.ಗಳ 10 ಮತ್ತು 20 ರೂ.ನೋಟುಗಳ ಸುರಿಮಳೆಗೈದು ಇಡೀ ವ್ಯವಸ್ಥೆಯನ್ನು ಅಣಕಿಸಿದ್ದಾರೆ.
ನವಸಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜನರು ಗಾಯಕಿಯರ ಮೇಲೆ ನೋಟುಗಳನ್ನು ಎಸೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೇಶಾದ್ಯಂತ ಜನರು ಹಣಕ್ಕಾಗಿ ಹಾಹಾಕಾರ ಪಡುತ್ತಿರುವಾಗ, ಬ್ಯಾಂಕುಗಳು ತಮ್ಮ ಬಳಿ ಸಾಕಷ್ಟು ಹಣವಿಲ್ಲವೆಂಬ ಬ್ಯಾನರ್‌ಗಳನ್ನು ಹಾಕಿರುವ ಈ ಸಂದರ್ಭದಲ್ಲಿ ಈ ನೋಟುಗಳ ಸುರಿಮಳೆಯ ಪ್ರದರ್ಶನವಾಗಿದೆ. ಕಾರ್ಯಕ್ರಮದಲ್ಲಿ ಸಂಗ್ರಹಿಸಲಾದ ಹಣವನ್ನು ಸಾಮಾಜಿಕ ಕಾರ್ಯಗಳಿಗಾಗಿ ಬಳಸಲಾಗುವುದು ಎಂದು ಸಂಘಟಕರು ಸಮಜಾಯಿಷಿ ನೀಡಿದ್ದಾರೆ.
ಕೆಲವೇ ದಿನಗಳ ಹಿಂದೆ ಜನಪ್ರಿಯ ಗುಜರಾತಿ ಜಾನಪದ ಗಾಯಕ ಕೀರ್ತಿಧನ್ ಗಾರ್ಧವಿ ಡಾಯ್ರೋ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಅವರ ಮೇಲೆ ಹೊಸ 2,000 ರೂ. ನೋಟುಗಳ ಸುರಿಮಳೆಯಾಗಿತ್ತು.





