ಚಂಡಮಾರುತದ ಪ್ರಕೋಪಕ್ಕೆ 4 ಬಲಿ
ಬಟಂಗಾಸ್,ಡಿ.26: ಕ್ರಿಸ್‌ಮಸ್ ದಿನವಾದ ರವಿವಾರ ಫಿಲಿಪ್ಪೀನ್ಸ್‌ನ ಹಲವು ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತದ ಅಟ್ಟಹಾಸಕ್ಕೆ ಕನಿಷ್ಠ ನಾಲ್ಕು ಮಂದಿ ಬಲಿಯಾಗಿದ್ದಾರೆ ಹಾಗೂ ನೂರಾರು ಮನೆಗಳು ನಾಶಗೊಂಡಿವೆ.
ಫಿಲಿಪ್ಪೀನ್ಸ್ ಜನತೆ ಕ್ರಿಸ್‌ಮಸ್ ಆಚರಣೆಯ ಸಂಭ್ರಮದಲ್ಲಿರುವಾಗಲೇ ನೊಕ್-ಟೆನ್ ಎಂಬ ಹೆಸರಿನ ಚಂಡಮಾರುತವು ಆಗ್ನೇಯ ಕರಾವಳಿಗೆ ಅಪ್ಪಳಿಸಿದೆ. ಚಂಡಮಾರುತದ ಹಾವಳಿಗೆ ಸಾವಿರಾರು ಗ್ರಾಮಸ್ಥರು ಹಾಗೂ ಪ್ರಯಾಣಿಕರು ನಿರ್ವ ಸಿತರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ಥಳೀಯವಾಗಿ ‘ನಿನಾ’ ಎಂದೇ ಕರೆಯಲ್ಪಡುವ ಈ ಚಂಡಮಾರುತವು ಪರ್ವತಾವೃತ ಹಾಗೂ ದ್ವೀಪ ಪ್ರಾಂತಗಳಲ್ಲಿ ಬಲವಾಗಿ ಬೀಸಿದ್ದು, ನೂರಾರು ಮನೆಗಳನ್ನು ಹಾನಿಗೊಳಿಸಿದೆ ಹಾಗೂ ಸಾವಿರಾರು ಮರಗಳನ್ನು ಬುಡಮೇಲುಗೊಳಿಸಿದೆ. ಹಲವೆಡೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ಕಡಿದುಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆಯೆಂದು ಅವು ಹೇಳಿವೆ.
ಚಂಡಮಾರುತವು ತುಸು ದುರ್ಬಲಗೊಂಡಿದ್ದರೂ, ಈಗಲೂ ಗಾಳಿಯು ತಾಸಿಗೆ 130 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಎಂದು ಸರಕಾರದ ಹವಾಮಾನ ಇಲಾಖೆಯ ವರದಿ ತಿಳಿಸಿದೆ.





