ಅಮೆರಿಕ ರಾಯಭಾರಿಗೆ ನೆತನ್ಯಾಹು ಬುಲಾವ್
ಇಸ್ರೇಲ್ ವಿರುದ್ಧ ಭದ್ರತಾ ಮಂಡಳಿ ನಿರ್ಣಯದ ಹಿನ್ನೆಲೆ
ಜೆರುಸಲೇಂ,ಡಿ.26: ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತುಗಳ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸುವ ನಿರ್ಣಯದ ಕುರಿತ ಮತದಾನದಲ್ಲಿ ಅಮೆರಿಕವು ಗೈರುಹಾಜರಾಗಿರುವುದಕ್ಕೆ ಸ್ಪಷ್ಟೀಕರಣ ನೀಡುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೋಮವಾರ ಅಮೆರಿಕದ ರಾಯಭಾರಿ ಡ್ಯಾನ್ ಶಾಪಿರೊ ಅವರನ್ನು ಆಗ್ರಹಿಸಿದ್ದಾರೆ. ಈ ವಿಷಯವಾಗಿ ಚರ್ಚಿಸಲು ತನ್ನನ್ನು ಭೇಟಿಯಾಗುವಂತೆ ನೆತಾನ್ಯಾಹು ಅವರು ಅಮೆರಿಕದ ರಾಯಭಾರಿ ಡ್ಯಾನ್‌ಶಾಪಿರೊ ಅವರಿಗೆ ಸೂಚಿಸಿದ್ದಾರೆ. ಇವರಿಬ್ಬರ ಭೇಟಿಯ ದಿನಾಂಕವೂ ಇನ್ನಷ್ಟೇ ನಿಗದಿಯಾಗಬೇಕಿದೆಯೆಂದು ಕ್ಸಿುನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಯೆಹೂದಿ ವಸಾಹತುಗಳ ನಿರ್ಮಾಣವನ್ನು ನಿಲ್ಲಿಸಬೇಕೆಂಬ ಐತಿಹಾಸಿಕ ನಿರ್ಣಯವನ್ನು ಬೆಂಬಲಿಸಿದ ರಾಷ್ಟ್ರಗಳು, ಅದಕ್ಕಾಗಿ ‘ರಾಜತಾಂತ್ರಿಕ ಹಾಗೂ ಆರ್ಥಿಕ ಬೆಲೆ’ಯನ್ನು ತೆರಬೇಕಾದೀತು ಎಂದು ನೆತನ್ಯಾಹು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಅವರು ಅಮೆರಿಕ ರಾಯಭಾರಿಯರಿಗೆ ತನ್ನನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ.
ಅಮೆರಿಕದ ಗೈರುಹಾಜರಿಯೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಸ್ರೇಲ್ ಪೂರ್ವ ಜೆರುಸಲೇಂ ಸೇರಿದಂತೆ ಫೆಲೆಸ್ತೀನ್ ಆಕ್ರಮಿತ ಪ್ರದೇಶದಲ್ಲಿ ಎಲ್ಲಾ ರೀತಿಯ ವಸಾಹತು ಚಟುವಟಿಕೆಗಳನ್ನು ತಕ್ಷಣವೇ ಹಾಗೂ ಸಂಪೂರ್ಣವಾಗಿ ಕೊನೆಗೊಳಿಸಬೇಕೆಂಬ ನಿರ್ಣಯವನ್ನು 14-0 ಮತಗಳಿಂದ ಅಂಗೀಕರಿಸಿತು.
ನಿರ್ಣಯದ ವಿರುದ್ಧ ವಿಟೋ ಪ್ರಯೋಗಿಸದೆ ಇದ್ದುದಕ್ಕಾಗಿ ಅಮೆರಿಕದ ವಿರುದ್ಧ ಕಿಡಿಕಾರಿರುವ ನೆತನ್ಯಾಹು ಅವರು, ಬರಾಕ್ ಒಬಾಮ ಅವರು ಇಸ್ರೇಲ್ ಮೇಲೆ ಪ್ರಹಾರವೆಸಗಿದ್ದಾರೆಂದು ಹೇಳಿದ್ದಾರೆ.







