"ಯುರೋಪಿಯನ್ ಅಲ್ಲದ್ದರಿಂದ ನನ್ನ ಕಡೆಗಣನೆ "
ಪೋಪ್ ಗೆ ಅಪಹೃತ ಭಾರತೀಯ ಪಾದ್ರಿಯ ಮೊರೆ

ಕೊಟ್ಟಾಯಂ, ಡಿ.27: ಯೆಮೆನ್ ನಗರದಿಂದ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಪಹೃತಗೊಂಡಿರವ ಭಾರತೀಯ ಪಾದ್ರಿ ಟಾಮ್ ಉಝುನ್ನಲಿಲ್ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿರುವ ವೀಡಿಯೊವೊಂದರಲ್ಲಿ ಪೋಪ್ ಫ್ರಾನ್ಸಿಸ್, ಭಾರತದ ಸರಕಾರ ಹಾಗೂ ಇತರ ಸಂಬಂಧಿತರಿಗೆ ತಮ್ಮನ್ನು ಬಿಡುಗಡೆಗೊಳಿಸುವಂತೆ ವಿನಂತಿಸಿದ್ದಾರೆ.
‘ನಾನೊಬ್ಬ ಯುರೋಪಿಯನ್ ಪಾದ್ರಿಯಾಗಿರುತ್ತಿದ್ದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು. ನಾನೊಬ್ಬ ಭಾರತೀಯನಾಗಿದ್ದುದರಿಂದ ನನಗೆ ಅಷ್ಟೊಂದು ಪ್ರಾಮುಖ್ಯತೆಯಿಲ್ಲ,’’ ಎಂದು 57 ವರ್ಷದ ಪಾದ್ರಿ ವೀಡಿಯೊದಲ್ಲಿ ಹೇಳಿರುವುದು ದಾಖಲಾಗಿದೆ.
ಪೋಪ್ ಅವರನ್ನೂ ಉದ್ದೇಶಿಸಿದ ಪಾದ್ರಿ ‘‘ಪ್ರೀತಿಯ ಪೋಪ್ ಫ್ರಾನ್ಸಿಸ್, ಒಬ್ಬ ತಂದೆಯಾಗಿ ನನ್ನ ಜೀವವನ್ನು ಕಾಪಾಡಿ. ನಾನು ತುಂಬಾ ಖಿನ್ನನಾಗಿದ್ದೇನೆ. ನನ್ನ ಆರೋಗ್ಯ ಹದಗೆಡುತ್ತಿದೆ’’ ಎಂದು ಹೇಳಿದ್ದು ತನ್ನನ್ನು ಅಪಹರಿಸಿದವರು ಭಾರತ ಸರಕಾರ, ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಸಂಪರ್ಕಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ‘‘ಆದರೂ ನನ್ನನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ’’ ಎಂದು ಹೇಳಿದ ಫಾದರ್ ಟಾಮ್ ತನ್ನನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುವಂತೆ ಭಾರತದ ಎಲ್ಲಾ ಕ್ರೈಸ್ತರನ್ನೂ, ಬಿಷಪ್ ಹಾಗೂ ಪಾದ್ರಿಗಳನ್ನು ವಿನಂತಿಸಿದ್ದಾರೆ.
ಫಾದರ್ ಟಾಮ್ ಅವರು ಕೊಟ್ಟಾಯಂ ಜಿಲ್ಲೆಯ ರಾಮಪುರಂ ಗ್ರಾಮದವರಾಗಿದ್ದಾರೆ. ವೀಡಿಯೊದಲ್ಲಿ ಅವರು ಬಹಳಷ್ಟು ನಿತ್ರಾಣರಾಗಿರುವಂತೆ ಹಾಗೂ ಉಸಿರಾಡಲು ಕಷ್ಟಪಡುವಂತೆ ಕಾಣುತ್ತಿದೆ. ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಲ್ಪಟ್ಟಿರುವ ವೀಡಿಯೊದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ ಹಾಗೂ ಅದನ್ನು ಯಾವಾಗ ಚಿತ್ರೀಕರಿಸಲಾಗಿದೆಯೆಂಬುದೂ ತಿಳಿದು ಬಂದಿಲ್ಲ.







